

> ಕಿರುವಾರ ಎಸ್. ಸುದರ್ಶನ್ ಕೋಲಾರ
ಜಿಲ್ಲೆಯಲ್ಲಿ ರಾಗಿ ಬೆಳೆ ಕೊಯ್ಲಿಗೆ ಬಂದಿದ್ದು, ರೈತರು ಕಟಾವು ಶುರು ಮಾಡಿದ್ದಾರೆ. ಆದರೆ, ಕೂಲಿ ಕಾರ್ಮಿಕರ ಕೊರತೆಯಿಂದ ಬಹುತೇಕರು ಯಂತ್ರಗಳ ಮೊರೆ ಹೋಗುತ್ತಿದ್ದಾರೆ.
ಗಡಿ ಜಿಲ್ಲೆಯಲ್ಲಿ ಈಚೆಗೆ ಕೃಷಿ ಕಾರ್ಮಿಕರ ಕೊರತೆ ಎದುರಾಗಿರುವುದರಿಂದ ರಾಗಿ ಕಟಾವು ಯಂತ್ರಗಳು ಜಮೀನಿಗೆ ಲಗ್ಗೆಯಿಟ್ಟಿದ್ದು, ಒಂದು ತಾಸಿಗೆ 3,500 ರಿಂದ 4,000 ರೂ. ಬಾಡಿಗೆ ಪಡೆಯಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 95,448 ಹೆಕ್ಟೇರ್ ಕೃಷಿ ಪ್ರದೇಶವಿದ್ದು, ಈ ಪೈಕಿ 86,630 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳ ಬಿತ್ತನೆ ಆಗಿದ್ದು, ಇದಲ್ಲಿ ಬಹುಪಾಲು ಅಂದರೆ 60,973 ಹೆಕ್ಟೇರ್ ಪ್ರದೇಶ(ಶೇ.9.76)ದಲ್ಲಿ ರಾಗಿ ಬೆಳೆಯಲಾಗಿದೆ.
ಮುಂಗಾರು ಹಂಗಾಮಿನ ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಭಾರಿ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಆದರೆ ಮಧ್ಯದಲ್ಲಿ ಮಳೆ ಕೊರತೆ ಎದುರಾಗಿತ್ತು. ಅಕ್ಟೋಬರ್ ಎರಡನೇ ವಾರ ಸುರಿದ ಮಳೆಗೆ ಬೆಳೆಗಳು ಚೇತರಿಸಿಕೊಂಡು ಉತ್ತಮ ಸಲು ಬಂದಿದ್ದು, ಈಗ ರಾಗಿ ಕೊಯ್ಲು ಶುರುವಾಗಿದೆ.
ಶೇ.20 ಬಾಡಿಗೆ ಹೆಚ್ಚಳ
ಕಟಾವಿಗೆ ಬಂದಿರುವ ರಾಗಿಯನ್ನು ಕೆಲವರು ಕೊಯ್ಲು ಮಾಡುತ್ತಿದ್ದು, ಕೂಲಿ ಕಾರ್ಮಿಕರು ಸಕಾಲಕ್ಕೆ ದೊರೆಯುತ್ತಿಲ್ಲ. ಅದರಲ್ಲೂ ಒಂದು ಎಕರೆ ರಾಗಿ ತೆನೆ ಕಟಾವು ಮಾಡಲು 8,000 ರಿಂದ 10,000 ರೂ.ಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಒಂದು ದಿನದ ಕೂಲಿ 400 ರೂ. ಆಗಿದೆ. ಕೂಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಂಧ್ರ, ತಮಿಳುನಾಡು ಮೂಲಕ ಯಂತ್ರಗಳ ಮಾಲೀಕರು ಕೋಲಾರ ಜಿಲ್ಲೆಗೆ ಆಗಮಿಸಿ ಕಟಾವು ಪ್ರಾರಂಭಿಸಿದ್ದಾರೆ.
ಇನ್ನು ಎರಡ್ಮೂರು ತಿಂಗಳು ಜಿಲ್ಲೆಯಲ್ಲೇ ಇದ್ದು, ರಾಗಿ ಕಟಾವು ಮಾಡುತ್ತಾರೆ. ಆದರೆ ಕಳೆದ ಬಾರಿಗಿಂತ ಶೇ.20 ಬಾಡಿಗೆ ಹೆಚ್ಚಿಸಿದ್ದು, ರೈತರಿಗೆ ಹೊರೆಯಾಗಲಿದೆ. ಕೃಷಿ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಈ ಕೂಡಲೇ ಮಧ್ಯೆ ಪ್ರವೇಶ ಮಾಡಿ ಒಂದು ತಾಸಿಗೆ ಸೂಕ್ತ ದರ ನಿಗದಿಪಡಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಮೂಲೆ ಸೇರಿದೆ "ಯಂತ್ರಧಾರೆ'
ರೈತರಿಗೆ ಅನುಕೂಲವಾಗಬೇಕಾಗಿದ್ದ ಯಂತ್ರಧಾರೆ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೇಂದ್ರಗಳಿಗೆ ಇಲಾಖೆಯಿಂದ ಕಲ್ಪಿಸಲಾಗಿರುವ ವಾಹಗಳು ರಿಪೇರಿ ಆಗಿ ಮೂಲೆಗುಂಪಾಗಿವೆ. ಇದರಿಂದಾಗಿ ಯಂತ್ರಗಳ ಉಪಯೋಗವು ರೈತರಿಗೆ ದೊರೆಯದಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ
ಖಾಸಗಿ ಯಂತ್ರಗಳ ಮಾಲೀಕರು ದಿನಕ್ಕೆ 9 ಗಂಟೆ ಕಟಾವು ಮಾಡಿ 35 ಸಾವಿರ ರೂ. ಪಡೆಯುತ್ತಿದ್ದಾರೆ ಎನ್ನಲಾಗಿದೆ.
* ಮಧ್ಯವರ್ತಿಗಳ ಹಾವಳಿ
ಹೊರ ರಾಜ್ಯಗಳಿಂದ ಯಂತ್ರಗಳು ಬಂದಿರುವುದರಿಂದ ಮಾಲೀಕರಿಗೆ, ಚಾಲಕರಿಗೆ ರೈತರ ಪರಿಚಯ ಇರುವುದಿಲ್ಲ. ಅವರು ಸ್ಥಳಿಯ ಮಧ್ಯವರ್ತಿಗಳ ಮೂಲಕ ರೈತರನ್ನು ಸಂಪರ್ಕಿಸಿ ಕಟಾವಿಗೆ ಬುಕ್ ಮಾಡಿಸಿ, ಹಣ ಪಡೆದು ಕಟಾವು ಮಾಡಿಸುತ್ತಿದ್ದಾರೆ. ಆದರೆ ನಿಗದಿ ಪಡಿಸಿಕೊಂಡಿರುವ ದರಕ್ಕೆ ಬುಕ್ ಆದರೂ ಮಧ್ಯವರ್ತಿಗಳಿಗೆ ಕಮಿಷನ್ ನೀಡಬೇಕಾಗಿದೆ. ಇದರಿಂದಾಗಿ ಯಂತ್ರದ ಮಾಲೀಕನಿಗೆ ಸಿಗುವುದು ಕೇವಲ <2,500ರಿಂದ 3000 ಮಾತ್ರ. ಒಂದು ವೇಳೆ ಮಧ್ಯವರ್ತಿಗಳ ಮೂಲಕ ಬುಕ್ ಆಗದಿದ್ದರೆ ಗ್ರಾಮದಲ್ಲಿ ವಾಹನ ನಿಲ್ಲಿಸಿಕೊಳ್ಳಲು ಸಹ ಅವಕಾಶ ನೀಡುವುದಿಲ್ಲ ಎಂದು ಮಾಲೀಕರೊಬ್ಬರು "ವಿಜಯವಾಣಿ'ಗೆ ತಿಳಿಸಿದರು.
* ತಡವಾದರೆ ಹಾನಿ ಆತಂಕ
ಕೊಯ್ಲಿಗೆ ಬಂದಿರುವ ರಾಗಿಯನ್ನು ಸಕಾಲಕ್ಕೆ ಕಟಾವು ಮಾಡಿ ಸಂಸರಿಸಬೇಕು. ಮಳೆ ಬಂದರೆ ತೇನೆಯಲ್ಲೇ ಮೊಳಕೆ ಒಡೆದು ಹಾನಿಯಾಗುತ್ತದೆ. ತಡ ಮಾಡಿದರೆ ಸಲು ಕೈಗೆ ಸಿಗದಂತಾಗುತ್ತದೆ. ಆದ್ದರಿಂದ, ರೈತರು ಅನಿವಾರ್ಯವಾಗಿ ಯಂತ್ರದ ಮಾಲೀಕರು ಹೇಳಿದಷ್ಟು ಹಣ ನೀಡಬೇಕಾಗಿದೆ.
ಕೋಟ್...
ರಾಗಿ ಕಟಾವು ಯಂತ್ರ ಖರೀದಿಗೆ ಸಬ್ಸಿಡಿ ದರದಲ್ಲಿ ಇಲಾಖೆಯಿಂದಲೇ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಯಾರೊಬ್ಬರೂ ಮುಂದೆ ಬರಲಿಲ್ಲ. ಹೊರ ರಾಜ್ಯದವರು ಜಿಲ್ಲೆಗೆ ಬಂದು ಹೆಚ್ಚು ಬಾಡಿಗೆ ವಸೂಲಿ ಮಾಡುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು.
> ಎಂ.ಆರ್.ಸುಮಾ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ.
ಕೋಟ್...
ಹೊರ ರಾಜ್ಯಗಳಿಂದ ರಾಗಿ ಕಟಾವು ಯಂತ್ರಗಳ ಮಾಲೀಕರು ಒಂದು ತಾಸಿಗೆ 4,000 ರೂ. ಬಾಡಿಗೆ ನಿಗದಿ ಮಾಡಿದ್ದಾರೆ. ಇನ್ನು ಕೂಲಿ ಕಾರ್ಮಿಕರು ದೊರೆಯದ ಕಾರಣ ಬಾಡಿಗೆಗೆ ಯಂತ್ರ ಪಡೆಯುವುದು ಅನಿವಾರ್ಯವಾಗಿದ್ದು, ಸಂಬಂಧಪಟ್ಟ ಇಲಾಖಾಧಿಕಾರಿಗಳು ದರ ನಿಗದಿ ಮಾಡಿದರೆ ಅನುಕೂಲವಾಗುತ್ತದೆ.
> ವೆಂಕಟಾಚಲಪತಿ, ರೈತ, ಕಾಮದೇನಹಳ್ಳಿ,