ಹೊಸ ಜಾತಿಗಳ ಹೆಸರು ಕೈಬಿಡುವಂತೆ ಒತ್ತಡ | Anti constitution

Round table meeting
Published on

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ ಪಟ್ಟಿಯಲ್ಲಿನ ‘ಕ್ರಿಶ್ಚಿಯನ್ ಜಾತಿ’ ಕೈಬಿಡುವಂತೆ ಒತ್ತಡ ಹೆಚ್ಚಿದೆ. ‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಕರ್ನಾಟಕ’ ವೇದಿಕೆಯಡಿ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಅಪರಾಹ್ನ 12ಕ್ಕೆ ಪ್ರಮುಖರು ದುಂಡು ಮೇಜಿನ ಸಭೆ ನಿಗದಿಯಾಗಿದ್ದು, ‘ಕ್ರಿಶ್ಚಿಯನ್ ಜಾತಿ’ ಪಟ್ಟಿಯೇ ಈ ಸಭೆಯ ಪ್ರಧಾನ ಕಾರ್ಯಸೂಚಿಯಾಗಿದೆ.

ಪ್ರಕಟಿಸಿದ ಪಟ್ಟಿಗೆ ಆಕ್ಷೇಪಣೆ, ಸಲಹೆ ಆಹ್ವಾನಿಸಿದ ಆಯೋಗ ಅದನ್ನೆಲ್ಲ ಪರಿಗಣಿಸಿ ಪರಿಷ್ಕರಣೆ ಮಾಡುತ್ತದೆ ಎಂಬ ನಂಬಿಕೆ ಕ್ಷೀಣಿಸಿದೆ. ಈ ಪ್ರಯತ್ನ ತಡೆಯದಿದ್ದರೆ ಸಂವಿಧಾನಬಾಹಿರ ನಿರ್ಧಾರಕ್ಕೆ ಷರಾ ಬರೆದಂತಾಗುತ್ತದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.

ಅಲ್ಲದೆ, ಕುರುಬ ಕ್ರಿಶ್ಚಿಯನ್, ಲಿಂಗಾಯತ್ ಕ್ರಿಶ್ಚಿಯನ್ ಇತ್ಯಾದಿ ಹೊಸ ಜಾತಿಗಳ ಸೇರ್ಪಡೆ ಔಚಿತ್ಯವೇನು ಎಂಬ ಪ್ರಶ್ನೆಗೆ ಉತ್ತರವಾಗಲಿ, ಸ್ಪಷ್ಟೀಕರಣವಾಗಲಿ ಆಯೋಗ ನೀಡಿಲ್ಲ. ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಬೆಂಬಲಿಸುವಂತಹ ಮಾತನಾಡಿದ್ದಾರೆ.

ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಿಗೆ ಅವಕಾಶವಿಲ್ಲ. ಸಮೀಕ್ಷೆಯ ಜಾತಿ ಕಾಲಂನಲ್ಲಿರುವ ಕ್ರಿಶ್ಚಿಯನ್‌ಗೆ ಜೋಡಣೆ ಮಾಡಿದ ಹೊಸ ಜಾತಿಗಳನ್ನು ಕೈಬಿಡಲೇಬೇಕು ಎಂದು ಒತ್ತಡ ಹೇರಲು ಪ್ರಮುಖರು ಯೋಚಿಸಿದ್ದಾರೆ.

ರಾಜ್ಯಪಾಲರಿಗೆ ಮನವಿ

ವಿವಿಧ ಕ್ಷೇತ್ರಗಳ ಪ್ರಮುಖರು, ತಜ್ಞರು ಮೊದಲ ದುಂಡು ಮೇಜಿನ ಸಭೆ ಮಂಗಳವಾರ ನಡೆದು, ಮಧ್ಯಾಹ್ನ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಭೇಟಿಯಾಗಿ ಜಾತಿ ಕಾಲಂನಿಂದ ಕ್ರಿಶ್ಚಿಯನ್ ಹೆಸರಿನ ಹೊಸ ಜಾತಿಗಳನ್ನು ಕೈಬಿಡುವಂತೆ ಸರ್ಕಾರ, ಆಯೋಗಕ್ಕೆ ನಿರ್ದೇಶಿಸಲು ಕೋರಲಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ 10 ದುಂಡು ಮೇಜಿನ ಸಭೆಗಳನ್ನು ನಡೆಸಲಿದೆ. ಸಮೀಕ್ಷಾ ಕಾರ್ಯ ಆರಂಭಕ್ಕೆ ಮುನ್ನವೇ ಹೊಸ ಜಾತಿಗಳನ್ನು ಕೈಬಿಡಬೇಕು. ಸಾಮಾಜಿಕ ನ್ಯಾಯಕ್ಕೆ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಮಾಡುವುದಕ್ಕೆ ಬಿಡುವುದಿಲ್ಲ ಎಂಬ ಎಚ್ಚರಿಕೆ ಸಂದೇಶ ರವಾನಿಸಲಿದೆ.

ದುಂಡು ಮೇಜಿನ ಸಭೆಯಲ್ಲಿ ವಿಶ್ರಾಂತ ಕುಲಪತಿಗಳಾದ ಡಾ.ವಿಷ್ಣುಕಾಂತ ಚಟಪಲ್ಲಿ, ಡಾ.ಕೆ.ಆರ್.ವೇಣುಗೋಪಾಲ್, ಡಾ.ಗೋಮತಿದೇವಿ, ನಾರಾಯಣಗೌಡ, ಖ್ಯಾಯ ವೈದ್ಯ ಡಾ.ಅಂಜಿನಪ್ಪ, ನಿವೃತ್ತ ಐಎಎಸ್ ಅಧಿಕಾರಿಗಳಾದ ಲಕ್ಷ್ಮೀನಾರಾಯಣ, ಎಸ್.ಎನ್.ಜಯರಾಮ್, ಸಿ.ಸೋಮಶೇಖರ್, ಬಿ.ಎಚ್.ಅನಿಲ್‌ಕುಮಾರ್, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಜ್ಯೋತಿ ಪ್ರಕಾಶ್ ಮಿರ್ಜಿ, ಭಾಸ್ಕರರಾವ್ ಇನ್ನಿತರ ಪ್ರಮುಖರು, ಸಂಸದರಾದ ಯದುವೀರ ಒಡೆಯರ್, ಪಿ.ಸಿ.ಮೋಹನ್, ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net