ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ

sgr patrika
ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ನಗರಸಭಾ ಸದಸ್ಯೆ ಸವಿತಾ ವಾಸು ಉದ್ಘಾಟಿಸಿದರು. ಡಾ. ರಾಜೇಶ್ವರಿ, ಡಾ. ಶಿವಾನಂದ್ ಭಟ್ ಇತರರಿದ್ದರು.
Published on

ಸಾಗರ: ಕನ್ನಡ ಪತ್ರಿಕೋದ್ಯಮಕ್ಕೆ 180 ವರ್ಷಗಳ ಸುದೀರ್ಘ ಇತಿಹಾಸವಿದೆ. ಸುದ್ದಿ, ಮನರಂಜನೆ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ವಿಷಯಗಳನ್ನು ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದು ಲೇಖಕ ಪೂರ್ಣಪ್ರಜ್ಞ ಬೇಳೂರು ಹೇಳಿದರು.
ಸಾಗರದ ಶ್ರೀಮತಿ ಇಂದಿರಾ ಗಾಂಧಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ವಂಶವಾಹಿನಿ ಟ್ರಸ್ಟ್ ಮತ್ತು ಪತ್ರಿಕಾ ಸ್ನೇಹಿತರು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ನಿಮ್ಮ ಭವಿಷ್ಯಕ್ಕೆ ಬೇಕಾದ ಎಲ್ಲ ಮಾಹಿತಿಗಳನ್ನು ಪತ್ರಿಕೆಗಳು ಕೊಡುತ್ತವೆ. ಜ್ಞಾನಪ್ರಸಾರದ ಅಂಗವಾಗಿ ಕೆಲಸ ಮಾಡುತ್ತಿರುವ ಪತ್ರಿಕೆಗಳ ಬಗ್ಗೆ ನಿರಾಸಕ್ತಿ ಸಲ್ಲದು. ಬಿಡುವಿಲ್ಲದೆ ತಮ್ಮ ವೃತ್ತಿ ಜೀವನದ ಜತೆಗೆ ಸುದ್ದಿಯ ಬೆನ್ನತ್ತಿಹೋಗುವ ಪತ್ರಕರ್ತರ ಬದುಕು ಸಂಕೀರ್ಣವಾಗಿರುತ್ತದೆ. ಪತ್ರಿಕಾ ರಂಗವನ್ನು ನೆನಪಿಸಿಕೊಳ್ಳುವ ದಿನವಾಗಿ ಜು.1 ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ವಂಶವಾಹಿನಿ ಟ್ರಸ್ಟ್ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ ಮಾತನಾಡಿ, ಆಯಾ ಕ್ಷೇತ್ರದ ಜಯಂತಿಯನ್ನು ಅವರವರೇ ಮಾಡಬೇಕೆನ್ನುವ ಸಂಕೀರ್ಣ ಸ್ಥಿತಿ ಇದೆ. ಆದರೆ ಆಯಾ ಕ್ಷೇತ್ರದಿಂದ ಉಪಕೃತರಾದವರೂ ಜಯಂತಿ ಆಚರಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ಟ್ರಸ್ಟ್ ಪತ್ರಿಕಾ ದಿನ ಆಚರಿಸುವ ಜತೆಗೆ ಸಾಧಕ ಪತ್ರಕರ್ತರನ್ನು ಸನ್ಮಾನಿಸುವ ಕೆಲಸ ಮಾಡುತ್ತ ಬರುತ್ತಿದೆ. ಅಕ್ಷರ ಲೋಕವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ನಗರಸಭಾ ಸದಸ್ಯೆ ಸವಿತಾ ವಾಸು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯೆ ಡಾ. ರಾಜೇಶ್ವರಿ, ಐಕ್ಯೂಎಸಿ ಸಂಚಾಲಕ ಡಾ. ಶಿವಾನಂದ್ ಎಸ್. ಭಟ್, ಸಕಲ ರಾಜೇಶ್ ಬಡ್ತಿ, ಶ್ರೀಪಾದ ಕವಲಕೋಡು, ಶಾಲಿನಿ, ಸುಷ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net