ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನ; ಲೋಕಸಭಾಧ್ಯಕ್ಷರ ಜತೆ ಸ್ಪೀಕರ್ ಯು.ಟಿ.ಖಾದರ್ ಚರ್ಚೆ

UT KHADAR
Published on

ಬೆಂಗಳೂರು: ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನವನ್ನು ಕರ್ನಾಟಕದಲ್ಲಿ ನಡೆಸುವ ಕುರಿತು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಲೋಕಸಭೆ ಅಧ್ಯಕ್ಷ ಓಮ್ ಪ್ರಕಾಶ್ ಬಿರ್ಲಾ ಜತೆ ಸಮಾಲೋಚಿಸಿದರು.

ನವದೆಹಲಿಯಲ್ಲಿ ಓಮ್ ಪ್ರಕಾಶ್ ಬಿರ್ಲಾ ಅವರನ್ನು ಭೇಟಿ ಮಾಡಿದ ಅವರು, ಸುದೀರ್ಘ 22 ವರ್ಷಗಳ ವರ್ಷಗಳ ನಂತರ ಕರ್ನಾಟಕದಲ್ಲಿ ಈ ಸಮ್ಮೇಳನ ನಡೆವ ಅಭಿಲಾಷೆಯನ್ನು ಖಾದರ್ ವ್ಯಕ್ತಪಡಿಸಿದರು. ಇದಕ್ಕೆ ಲೋಕಸಭಾಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಲ್ಲದೆ, ಸೆ.23 ಮತ್ತು 24 ರಂದು ನವದೆಹಲಿಯ ನೂತನ ಸಂಸತ್ ಭವನದಲ್ಲಿ ನಡೆಯಲಿರುವ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದರು.

ಸದನದ ಚಟುವಟಿಕೆ ಮಾಹಿತಿ

ತಾವು ಸಭಾಧ್ಯಕ್ಷರಾಗಿ ಆಯ್ದೆಯಾದ ನಂತರ ಸದನವನ್ನು ಕ್ರಿಯಾತ್ಮಕವಾಗಿ ನಡೆಸಲು ಕೈಗೊಂಡ ಕ್ರಮಗಳು, ಸದಸ್ಯರು ಭಾಗವಹಿಸುವಂತೆ ಪ್ರೇರೆಪಿಸುವಲ್ಲಿ ಕೈಗೊಂಡ ಕೆಲವು ಸುಧಾರಣಾ ಕ್ರಮಗಳನ್ನು ಖಾದರ್ ಲೋೀಕಸಭಾಧ್ಯಕ್ಷರ ಗಮನಕ್ಕೆ ತಂದರು.

ಸದನವನ್ನು ಈ ಹಿಂದೆ ಸಾಧಾರಣವಾಗಿ ಬೆಳಗ್ಗೆ 11ಕ್ಕೆ ಪ್ರಾರಂಭಿಸಲಾಗುತ್ತಿತ್ತು, ಆದರೆ ತಾವು ಕಾರ್ಯಕಲಾಪಗಳು ಹೆಚ್ಚು ಸಮಯ ನಡೆಯುವಂತಾಗಲು ಬೆಳಗ್ಗೆ 9 ರಿಂದ ಪ್ರಾರಂಭಿಸಲು ತೀರ್ಮಾನ ಕೈಗೊಂಡಿದ್ದೇವೆ. ಸದನವನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲು ಅನುಕೂಲವಾಗುವಂತೆ ಕೊರಂಗೆ ಸಹಕರಿಸುವ ಪ್ರಥಮ 23 ಸದಸ್ಯರುಗಳನ್ನು ಗೌರವಪೂರಕವಾಗಿ ಸನ್ಮಾನಿಸಲಾಗುತ್ತದೆ. ಸದಸ್ಯರಿಗೆ ಮೊಗಸಾಲೆಯಲ್ಲಿಯೇ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಬೋಜನ ವ್ಯವಸ್ಥೆ ಮಾಡಿರುವುದಾಗಿ ಮಾಹಿತಿ ನೀಡಿದರು.

ಸದನದಲ್ಲಿ ಸದಸ್ಯರು ಭಾಗವಹಿಸಿದ ಸಮಯವನ್ನು ಗುರುತಿಸಲು ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಳಕೆಯಿಂದ ಮಾಹಿತಿ ಉಪಲಬ್ಧ ಮಾಡಲಾಗಿದೆ. ಸದನದಲ್ಲಿ ಎಲ್ಲ ಸದಸ್ಯರು ಗಮನಿಸುವಂತೆ ಅತ್ಯುತ್ತಮ ಗುಣಮಟ್ಟದ ಲೋಹದಲ್ಲಿ ಸಂವಿಧಾನ ಪೀಠಿಕೆಯನ್ನು ವಿಧಾನ ಸಭೆಯ ಸಭಾಂಗಣದಲ್ಲಿ ಅಳವಡಿಕೆ ಮಾಡಲಾಗಿದೆ.

ನವದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್ ಮಾದರಿಯಲ್ಲಿ ಕರ್ನಾಟದಲ್ಲೂ ಬಾಲಬ್ರೂಹಿ ಕಟ್ಟಡದಲ್ಲಿ ವಿಧಾನ ಮಂಡಲ ಸಂಸ್ಥೆ ಉದ್ಭಾಟಿಸಲಾಗಿದೆ ಎಂದು ಲೋಕಸಭಾಧ್ಯಕ್ಷರಿಗೆ ಯು.ಟಿ.ಖಾದರ್ ವಿವರಣೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net