

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಯಲ್ಲೋರ್ವನಾದ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಿರಸ್ಕರಿಸಿದ್ದಾರೆ.
ಈ ಹಿಂದಿನ ಆದೇಶದಂತೆ ಆಗಿದ್ದರೆ ನಾಲ್ವರು ಅಪರಾಧಿಗಳಾದ ವಿನಯ್ ಶರ್ಮಾ, ಮುಕೇಶ್ ಸಿಂಗ್, ಅಕ್ಷಯ್ ಠಾಕೂರ್, ಪವನ್ ಕುಮಾರ್ ಗುಪ್ತಾರನ್ನು ಇಂದು ಗಲ್ಲಿಗೇರಿಸಬೇಕಿತ್ತು.
ಆದರೆ ಅಪರಾಧಿಗಳ ಗಲ್ಲುಶಿಕ್ಷೆಗೆ ತಡೆಕೋರಿ ವಕೀಲ ಎ.ಪಿ.ಸಿಂಗ್ ದೆಹಲಿಯ ಪಟಿಯಾಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ವಿನಯ ಶರ್ಮಾ ಕ್ಷಮಾದಾನಕ್ಕೆ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಾರೆ. ಆ ಬಗ್ಗೆ ಇನ್ನೂ ಆದೇಶ ಹೊರವಿದ್ದಿಲ್ಲ. ಹಾಗಾಗಿ ಫೆ.1ರಂದು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.
ವಿಚಾರಣೆ ನಡೆಸಿದ ದೆಹಲಿ ಪಟಿಯಾಲಾ ಕೋರ್ಟ್ನ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ನಿನ್ನೆ (ಜ.31)ರಂದು ಗಲ್ಲು ಶಿಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಿದ್ದಾರೆ.
ಅಲ್ಲದೆ ಇನ್ನೋರ್ವ ಅಪರಾಧಿ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ನಿನ್ನೆ ತಿರಸ್ಕರಿಸಿದೆ. ಆದರೆ ಮುಂದಿನ ಆದೇಶ ಬರುವವರೆಗೂ ಅಪರಾಧಿಗಳನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ.
ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮುಂದೂಡಲ್ಪಡುತ್ತಿರುವುದರ ವಿರುದ್ಧ ನಿರ್ಭಯಾ ತಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)