

ಮೆಲ್ಬೋರ್ನ್/ನವದೆಹಲಿ: ಮಾರಕ ಕರೊನಾ ವ್ಯಾಧಿ ಗುಣಪಡಿಸುವ ಚಿಕಿತ್ಸೆಗೆ ವಿಜ್ಞಾನಿಗಳು ಆರು ಸಂಭಾವ್ಯ ಔಷಧಿಗಳನ್ನು ಗುರುತಿಸಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚು ಸಂಯುಕ್ತಗಳಿಂದ ಇವನ್ನು ರೂಪಿಸಲಾಗುವುದೆಂದು ಅವರು ಹೇಳಿದ್ದಾರೆ.
ಶಿಫಾರಸು ಮಾಡಲಾದ ಔಷಧಿಗಳ ಪರಿಣಾಮವನ್ನು ಕ್ಲಿನಿಕಲ್ ಪರೀಕ್ಷೆ ಮತ್ತು ಇತರ ಸಂಯುಕ್ತಗಳಲ್ಲಿ ಪರೀಕ್ಷಿಸಲಾಗಿದೆಯೆಂದು ‘ನೇಚರ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಸಂಶೋಧನಾ ವರದಿ ತಿಳಿಸಿದೆ. ಸದ್ಯಕ್ಕಂತೂ ಕೋವಿಡ್-19ಗೆ ಯಾವುದೇ ನಿರ್ದಿಷ್ಟ ಪರಿಣಾಮಕಾರಿ ಚಿಕಿತ್ಸಾ ಅವಕಾಶವಿಲ್ಲ ಎಂದು ಆಸ್ಟ್ರೇಲಿಯಾದ ಕ್ವೀನ್ಸ್ಲೆಂಡ್ ವಿಶ್ವವಿದ್ಯಾಲಯದ ಪೊ›ಫೆಸರ್ ಲ್ಯೂಕ್ ಗುಡ್ಡಟ್ ಹೇಳಿದ್ದಾರೆ.
ಭಾರತದಲ್ಲಿ ಅಂತಿಮ ಹಂತದಲ್ಲಿ ಗುಣಮುಖರಾದ ರೋಗಿಯ ಪ್ಲಾಸ್ಮಾ ಬಳಸಿ ಕೋವಿಡ್-19 ರೋಗಿಗೆ ಚಿಕಿತ್ಸೆ ನೀಡುವ ಸಾಧ್ಯತೆಯನ್ನು (ಕಾನ್ವಾಲೆಸೆಂಟ್ ಪ್ಲಾಸ್ಮಾ ಥೆರಪಿ) ಪ್ರಯೋಗಿಸಲು ಅಗತ್ಯವಾದ ನಿಯಮಾವಳಿ ರೂಪಿಸುವ ಪ್ರಕ್ರಿಯೆ ಭಾರತದಲ್ಲಿ ಅಂತಿಮ ಹಂತದಲ್ಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧಿಕಾರಿಗಳು ಹೇಳಿದ್ದಾರೆ.
ಕೇರಳ, ಕೋವಿಡ್ ವ್ಯಾಧಿಯಿಂದ ಗಂಭೀರವಾಗಿ ಬಳಲುತ್ತಿರುವವರ ಮೇಲೆ ಈ ರೀತಿಯ ಪರೀಕ್ಷೆ ನಡೆಸುವ ಮೊದಲ ರಾಜ್ಯವಾಗಲಿದೆ. ಈ ರೀತಿಯ ಮೊದಲ ಯೋಜನೆಗೆ ಐಸಿಎಂಆರ್, ಕೇರಳ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ ಎನ್ನಲಾಗಿದೆ.