

ಪ್ರವಾಸೋದ್ಯಮ ಅಭಿವೃದ್ಧಿಗೆ ಹೂಡಿಕೆದಾರರನ್ನು ಸೆಳೆಯಲು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾದರಿ ಯಲ್ಲಿ ಸಮಾವೇಶ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ 300ಕ್ಕೂ ಅಧಿಕ ಪ್ರವಾಸಿ ತಾಣಗಳಿದ್ದು, 40ಕ್ಕೂ ಹೆಚ್ಚಿನ ಜಲಪಾತ, 220 ಕಿ.ಮೀ.ಗೂ ಅಧಿಕ ಉದ್ದದ ಕರಾವಳಿ ಹೀಗೆ ವೈವಿಧ್ಯಮಯ ಸ್ಥಳಗಳಿವೆ. ಆದರೆ, ಅವುಗಳ ಅಭಿವೃದ್ಧಿ ಕುಂಠಿತವಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಪ್ರವಾಸಿ ತಾಣಗಳು ಉದ್ಯಮವಾಗಿ ಮಾರ್ಪಡದಿರುವುದು ಮತ್ತು ಮೂಲಸೌಕರ್ಯ ಕೊರತೆ ಹೆಚ್ಚಿರುವುದೇ ಅದಕ್ಕೆ ಕಾರಣ. ಆ ಕೊರತೆ ನೀಗಿಸಲು ಪ್ರವಾಸೋದ್ಯಮ ಇಲಾಖೆ ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆ ನಡೆಸಿದೆ.
ಉದ್ಯೋಗ, ಆದಾಯ ಹೆಚ್ಚಿಸಲು ಕ್ರಮ: 5 ವರ್ಷದಲ್ಲಿ ರಾಜ್ಯ ಪ್ರವಾಸೋದ್ಯಮವನ್ನು ದೇಶದಲ್ಲಿ 2ನೇ ಸ್ಥಾನಕ್ಕೆ ತಂದು ನಿಲ್ಲಿಸುವ ಗುರಿ ಹೊಂದಲಾಗಿದ್ದು, ಪ್ರವಾಸೋದ್ಯಮದಲ್ಲಿಯೇ 30 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಸರ್ಕಾರ ಘೋಷಿಸಿದೆ.
ಹಳೇ ಯೋಜನೆಗೆ ಹೂಡಿಕೆ: ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರಮುಖವಾಗಿ ಹಳೇ ಮತ್ತು ದೊಡ್ಡ ಯೋಜನೆಗಳಿಗೆ ಬಂಡವಾಳ ಹೂಡಲು ಆಹ್ವಾನಿಸಲಾಗುತ್ತದೆ. ಪ್ರಮುಖವಾಗಿ ಹಲವು ವರ್ಷಗಳ ಹಿಂದೆ ರೂಪಿಸಲಾದ ನಂದಿ ಬೆಟ್ಟ, ಮಧುಗಿರಿ ಏಕಶಿಲಾ ಬೆಟ್ಟ, ಯಾದಗಿರಿ ಬೆಟ್ಟಗಳಲ್ಲಿ ರೋಪ್ವೇ, ಕೇಬಲ್ ಕಾರ್ ವ್ಯವಸ್ಥೆ, ಶೋಲೆ ಬೆಟ್ಟ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಗರದ ರಾಮದೇವರ ಬೆಟ್ಟದಲ್ಲಿ 3ಡಿ ವರ್ಚುಯಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಶೋಲೆ ಚಿತ್ರ ಪ್ರದರ್ಶನ, ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಯಲ್ಲಿ ಚಿತ್ರದುರ್ಗ ಮತ್ತು ಕೋಟೆ ಇತಿಹಾಸ ಸಾರುವ ಬೆಳಕು-ದೃಶ್ಯ ಪ್ರದರ್ಶನಕ್ಕೆ ವ್ಯವಸ್ಥೆ, ಫಿಲಂಸಿಟಿ, ಅಮ್ಯೂಸ್ವೆುಂಟ್ ಪಾರ್ಕ್ಗಳ ನಿರ್ಮಾಣ ಇನ್ನಿತರ ಯೋಜನೆಗಳಿಗೆ ಖಾಸಗಿಯವರಿಂದ ಬಂಡವಾಳ ಹೂಡಿಕೆ ಮಾಡಿಸಲು ಚಿಂತನೆ ನಡೆಸಲಾಗಿದೆ. ರಾಜ್ಯ ಪ್ರವಾಸೋದ್ಯಮ ನೀತಿ 2019ರ ಕಾಲಾವಧಿ ಅಂತ್ಯಗೊಂಡಿದೆ. ಹೀಗಾಗಿ 2025ರ ಅವಧಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2025 ರೂಪಿಸಲು ಇನ್ಪೋಸಿಸ್ ಫೌಂಡೇಷನ್ನ ಸುಧಾಮೂರ್ತಿ ನೇತೃತ್ವದ ಸಮಿತಿ ರಚಿಸಲಾಗಿದ್ದು, ಸಮಿತಿ ಈಗಾಗಲೆ ಕಾರ್ಯಾರಂಭ ಮಾಡಿದೆ. ರಾಜ್ಯ ಬಜೆಟ್ಗೂ ಮುನ್ನ ನೀತಿ ಪ್ರಕಟವಾಗಲಿದೆ. ಅದಾದ ನಂತರ ಜಾಗತಿಕ ಪ್ರವಾಸೋದ್ಯಮ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ನೀತಿಯಲ್ಲಿ ಉಲ್ಲೇಖ
ಹೂಡಿಕೆದಾರರ ಸಮಾವೇಶ ಕುರಿತಂತೆ ಪ್ರವಾಸೋದ್ಯಮ ನೀತಿ 2025ರಲ್ಲೂ ಉಲ್ಲೇಖಿಸಲಾಗುತ್ತಿದೆ. ಸಮಾವೇಶವನ್ನು ಯಾವ ಅವಧಿಯಲ್ಲಿ ಮಾಡಬೇಕು, ಅದರಲ್ಲಿ ಯಾವೆಲ್ಲ ಅಂಶಗಳನ್ನು ಪರಿಗಣಿಸಬೇಕು, ಖಾಸಗಿ ಹೂಡಿಕೆ ಯಾವ ವಿಭಾಗದಲ್ಲಿ ಆಗಬೇಕು ಎಂಬುದನ್ನು ತಿಳಿಸಲಾಗುತ್ತದೆ.
16 ಮತ್ತು 17ರಂದು ಸಚಿವರ ಸಭೆ
ರಾಜ್ಯ ಪ್ರವಾಸೋದ್ಯಮ ನೀತಿ 2025 ರೂಪಿಸುವ ಸಲುವಾಗಿ ಡಿ.18,19ಕ್ಕೆ ಪ್ರವಾಸೋದ್ಯಮ ಸಂಬಂಧಿಸಿದ ಕ್ಷೇತ್ರಗಳ ಉದ್ಯಮಿಗಳೊಂದಿಗೆ ಕಾರ್ಯಾಗಾರ ನಡೆಸಲಾಗಿತ್ತು. ಅಲ್ಲಿ ವ್ಯಕ್ತವಾದ ಅಭಿಪ್ರಾಯ ಬಗ್ಗೆ ರ್ಚಚಿಸಲು ಜ.16, 17ರಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು, ನೀತಿ ರೂಪಿಸುವ ಸಮಿತಿ ಸದಸ್ಯರು ಸಭೆ ನಡೆಸಲಿದ್ದಾರೆ.
ರಾಜ್ಯ ಪ್ರವಾಸಿ ತಾಣಗಳಲ್ಲಿ ಖಾಸಗಿ ಹೂಡಿಕೆ ಮಾಡಿಸಿ, ಅಭಿವೃದ್ಧಿ ಮಾಡುವ ಸಲುವಾಗಿ ಜಾಗತಿಕ ಪ್ರವಾಸೋದ್ಯಮ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2025 ಪ್ರಕಟವಾದ ನಂತರ ಸಮಾವೇಶ ನಡೆಸಲು ಚಿಂತಿಸಲಾಗಿದೆ. | ಸಿ.ಟಿ.ರವಿ ಪ್ರವಾಸೋದ್ಯಮ ಸಚಿವ
| ಗಿರೀಶ್ ಗರಗ ಬೆಂಗಳೂರು