

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಬಹು ಜನಾಕರ್ಷಣೆಯ ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕುಮಾರ, ದಸರಾ ಕಿಶೋರಿ ಮತ್ತು ದಸರಾ ಕಿಶೋರ ಪ್ರಶಸ್ತಿಗಳ ಲೀಗ್ ಹಂತದ ಕುಸ್ತಿಗಳು ಪೂರ್ಣಗೊಂಡಿದ್ದು, ಕ್ವಾರ್ಟರ್ ಫೈನಲ್, ಪ್ರಿ ಕ್ವಾರ್ಟರ್ ಫೈನಲ್ ಹಂತ ತಲುಪಿವೆ.
ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಎಲ್ಲ ವಿಭಾಗಗಳ ಕ್ವಾರ್ಟರ್ ಫೈನಲ್ ಮತ್ತು ಸೆಮಿ ಫೈನಲ್ ಪಂದ್ಯಗಳು ಅ.8ರಂದು ನಡೆಯಲಿವೆ. ಅಂತಿಮ ಕುಸ್ತಿಗಳು ಅ.9ರಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿವೆ. ವಿವಿಧ ಪ್ರಶಸ್ತಿಗಳ ಕುಸ್ತಿಯ ಅಂತಿಮ ಸ್ಪರ್ಧೆ ಆಯೋಜನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕುಸ್ತಿ ಅಭಿಮಾನಿಗಳಿಗೆ ರೋಚಕ ಅನುಭವ ದೊರೆಯಲಿದೆ.
ಈ ಬಾರಿಯೂ ದಸರಾದ ಎಲ್ಲ ಪ್ರಶಸ್ತಿಗಳ ಅಂತಿಮ ಕುಸ್ತಿ ಪಂದ್ಯಾವಳಿಗಳನ್ನು ಬಹಳ ವಿನೂತವಾಗಿ ಆಯೋಜಿಸುವ ಸಂಬಂಧ ಚರ್ಚಿಸಲಾಗುತ್ತಿದೆ. ಇಷ್ಟು ವರ್ಷ ಕಾಲ ಒಂದು ಗಂಟೆ ಅಥವಾ ಅರ್ಧ ಗಂಟೆ ಮಾರ್ಫಿಟ್ ಕುಸ್ತಿ ನಡೆಸಲಾಗುತ್ತಿತ್ತು. ಆ ವೇಳೆ ಕುಸ್ತಿಯಲ್ಲಿ ಫಲಿತಾಂಶ ಬಾರದಿದ್ದರೆ ಸದರಿ ಕುಸ್ತಿಗಳನ್ನು ನಿಮಿಷದ ಪಾಯಿಂಟ್ ಕುಸ್ತಿಯಾಗಿ ಮಾರ್ಪಡಿಸಲಾಗುತ್ತಿತ್ತು. ಆದರೆ ಕಳೆದ ವರ್ಷದ ಕುಸ್ತಿಯನ್ನು ನಿಗದಿಯ ಸಮಯದಲ್ಲೇ ಪೂರ್ತಿಗೊಳಿಸುವ ಉದ್ದೇಶದಿಂದ ಮಾರ್ಫಿಟ್‌ನಲ್ಲೇ ಪಾಯಿಂಟ್ ಗಳಿಸಲು ಅವಕಾಶ ನೀಡಲಾಗಿತ್ತು. ಈ ಬಾರಿಯೂ ಅದು ಮುಂದುವರಿಯುವ ಸಾಧ್ಯತೆ ಇದೆ.
‘ದಸರಾ ಕೇಸರಿ’, ‘ದಸರಾ ಕಿಶೋರಿ’ ಕುಸ್ತಿಗೆ ತಲಾ 15 ನಿಮಿಷ, ‘ದಸರಾ ಕಿಶೋರ’ ಕುಸ್ತಿಗೆ 25 ನಿಮಿಷ ಹಾಗೂ ‘ದಸರಾ ಕಂಠೀರವ’ ಮತ್ತು ‘ದಸರಾ ಕುಮಾರ’ ಕುಸ್ತಿಯ ಹಂತಿಮ ಪಂದ್ಯದಕ್ಕೆ 30 ನಿಮಿಷ ನಿಗದಿ ಮಾಡುವ ಸಾಧ್ಯತೆ ಇದ್ದು, ಈ ಸಮಯದಲ್ಲಿ ಯಾರು ಹೆಚ್ಚು ಪಾಯಿಂಟ್ ಗಳಿಸುತ್ತಾರೆ ಅಥವಾ ಚಿತ್ ಮಾಡುತ್ತಾರೆ ಅವರಿಗೆ ಪ್ರಶಸ್ತಿ ದೊರೆಯಲಿದೆ.