

ಹೊಳೆಹೊನ್ನೂರು: ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಪಂ ಪಂಚಾಯಿತಿ ಮಟ್ಟದಲ್ಲೂ ಪಕ್ಷದ ಪೂರ್ವ ತಯಾರಿ ಕೆಲಸಗಳು ಆರಂಭವಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.
ಆನವೇರಿಯಲ್ಲಿ ಗುರುವಾರ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಂಘಟನೆ ಸದೃಢವಾದರೆ ಮಾತ್ರ ಕಾರ್ಯಸಾಧನೆ ಸುಲಭವಾಗುತ್ತದೆ ಎಂದರು.
ಕಾಂಗ್ರೆಸ್ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವಾಗಬೇಕು. ಮುಂದಿನ ದಿನಗಳಲ್ಲಿ ಗ್ರಾಪಂ ಚುನಾವಣೆಗಳಿಗೆ ಪಕ್ಷದ ಚಿಹ್ನೆ ನೀಡಲಾಗುವುದು. ಹಾಗಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು. ಪ್ರತಿಯೊಬ್ಬರಿಗೂ ಜವಾಬ್ದಾರಿ ಹಂಚಲಾಗುವುದು. ಕೆಲಸ ಮಾಡದ ಪದಾಧಿಕಾರಿಗಳು ಕಾರ್ಯಕರ್ತರಾಗಿ ಸೇವೆ ಸಲ್ಲಿಸಬಹುದು. ಗ್ರಾಮಾಂತರದ 31 ಗ್ರಾಪಂಗಳಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಒಂದು ಸುಳ್ಳನ್ನು ನೂರು ಸಲ ಹೇಳಿ ಸತ್ಯವಾಗಿಸುವ ಬಿಜೆಪಿಯವರು ಬೆಳೆ ಬೇಯಿಸಿಕೊಳ್ಳುತ್ತಿದ್ದರೆ. ಭಾವನಾತ್ಮಕ ಹಾಗೂ ಧಾರ್ಮಿಕ ಭಾವನೆ ಕೆದಕಿ ರಾಜಕಿಯ ಮಾಡುತ್ತಿದ್ದಾರೆ. ಹಾಗಾಗಿ ಚುನಾವಣೆ ಪೂರ್ವದಲ್ಲಿ ಪಕ್ಷ ಗಟ್ಟಿಯಾದರೆ ಮಾತ್ರ ಕಾರ್ಯಕರ್ತರು ಉಳಿಯಲು ಸಾಧ್ಯ. ಅಭ್ಯರ್ಥಿ ಯಾರೇ ಇರಲಿ. ಪಕ್ಷಕ್ಕೆ ಮತ ಕೇಳಿ ಎಂದು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು ಮಾತನಾಡಿ, ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಕಾರ್ಯಕರ್ತರ ಪಡೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಈ ಬಾರಿ ಗ್ರಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವುದು ನಿಶ್ಚಿತ. ಮುಂದಿನ ದಿನಗಳಲ್ಲಿ ಪಕ್ಷಕೆ ಒಳ್ಳೆಯ ದಿನಗಳು ಬರಲಿವೆ. ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡಬೇಕು. ಹೊಳೆಹೊನ್ನೂರು ಭಾಗ ಕಾಂಗ್ರೆಸ್ ಪಾಲಿಗೆ ಭದ್ರಕೋಟೆ. ಮುಂದಿನ ದಿನಗಳಲ್ಲಿ ನಿಯಮಿತವಾಗಿ ಸಭೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್ ಕರಿಯಣ್ಣ, ಆರ್.ಉಮೇಶ್, ಕೆ.ಆರ್.ಶ್ರೀಧರ್, ಎಚ್.ಎನ್.ನಾಗರಾಜ್, ಎ.ಜಿ.ಚನ್ನಬಸಪ್ಪ, ನ್ಯಾಮತ್ ವುಲ್ಲಾ, ರುದ್ರೇಶ್, ಹನುಮಂತಪ್ಪ, ಶ್ರೀನಿವಾಸ್, ಮಹಾಬಲೇಶ್, ಎಂ.ಜಿ.ಗುರುಮೂರ್ತಿ, ಎಚ್.ಜಿ.ಮಲ್ಲಯ್ಯ, ಜಯಪ್ಪ, ಚಂದ್ರಶೇಖರ್, ಸುರೇಶ್, ಲಕ್ಷ್ಮೀ, ಸರಸ್ವತಮ್ಮ ಇತರರಿದ್ದರು