ಮುಡಾ ಹಗರಣ ಪಾದಯಾತ್ರೆಗೆ ಮೈಸೂರಿನಲ್ಲಿ ಸಿದ್ಧತೆ

Preparations in Mysore for Muda Scandal Walk
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಹಗರಣ, ವಾಲ್ಮಿಕಿ ನಿಗಮ ಹಾಗೂ ಮುಡಾ ಹಗರಣ ಹಾಗೂ ಪರಿಶಿಷ್ಟರ ಉಪಯೋಜನೆ ಹಣ ದುರ್ಬಳಕೆ ವಿರುದ್ಧ ಬಿಜೆಪಿ ಆ.3ರಿಂದ ಹಮ್ಮಿಕೊಂಡಿರುವ ‘ಮೈಸೂರು ಚಲೋ ಪಾದಯಾತ್ರೆ’ಯಲ್ಲಿ ಪ್ರತಿದಿನ ಜಿಲ್ಲೆಯ ಐದುನೂರು ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಹೇಳಿದರು.

ಮೈಸೂರು ಚಲೋ ಪಾದಯಾತ್ರೆ ಕುರಿತು ಚರ್ಚಿಸಲು ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸಬೇಕು ಎಂದು ಕರೆ ನೀಡಿದರು.

ರಾಜ್ಯ ಸರ್ಕಾರ ಪ್ರತಿನಿತ್ಯ ಒಂದಲ್ಲಾ ಒಂದು ಹಗರಣದಲ್ಲಿ ಭಾಗಿಯಾಗುತ್ತಿದ್ದು, ಜನಹಿತವನ್ನು ಸಂಪೂರ್ಣ ಕಡೆಗಣಿಸಿದೆ. ಅಧಿಕಾರಕ್ಕೆ ಬರುವ ಉದ್ದೇಶದಿಂದ ಕಾಂಗ್ರೆಸ್ ಗೃಹ ಲಕ್ಷ್ಮೀ ಯೋಜನೆ ಘೋಷಣೆ ಮಾಡಿತು. ಆದರೆ, ಕಳೆದ ಎರಡು ತಿಂಗಳಿನಿಂದ ಯೋಜನೆಯಡಿ ಫಲಾನುಭವಿಗಳಿಗೆ ಹಣ ಪಾವತಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದು, ಮುಡಾದಲ್ಲಿ ಯಾವುದೇ ರೀತಿಯ ಹಗರಣ ನಡೆದಿಲ್ಲ ಎಂಬ ರೀತಿಯಲ್ಲಿ ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಗರಣವನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ಹರ್ಷವರ್ಧನ್ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಹಿಂದುಳಿದ ವರ್ಗಗಳ ಅಭಿವೃದ್ಧಿ ರಾಜ್ಯದೆಲ್ಲೆಡೆ ಕುಂಟಿತವಾಗಿದೆ. ಹೀಗೆಯೇ ಮುಂದುವರೆದರೆ ಹಿಂದುಳಿದ ವರ್ಗಗಳು ಅಭಿವೃದ್ಧಿಯಿಂದ ವಂಚಿತವಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಭಾಗಿಯಾಗಿದ್ದು ಹಾಗೂ ದಾಖಲೆಗಳ ಸಮೇತ ಸಿಕ್ಕಿಹಾಕಿಕೊಂಡಿರುವುದು ಈಗಾಗಲೇ ರಾಜ್ಯದ ಜನತೆಗೆ ತಿಳಿದಿದೆ. ಮುಖ್ಯಮಂತ್ರಿ ತಮ್ಮ ತಪ್ಪಿನ ಅರಿವಾಗಿ ಇದರಿಂದ ಮುಜುಗರಕ್ಕೆ ಒಳಗಾಗಿರುವುದು ಅವರ ನಡೆನುಡಿಯಲ್ಲಿ ತಿಳಿಯುತ್ತದೆ ಎಂದರು,.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಂಗಳಾ ಸೋಮಶೇಖರ್, ಪಕ್ಷದ ಪ್ರಮುಖರಾದ ಎಸ್.ಮಹದೇವಯ್ಯ, ಕಿರಣ್ ಜಯರಾಮೇಗೌಡ, ಮಡವಾಡಿ ಮಹೇಶ್, ಬಾಲು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net