ಬಾಲರಾಮನ ಪ್ರಾಣಪ್ರತಿಷ್ಠೆ ವಾರ್ಷಿಕೋತ್ಸವಕ್ಕೆ ಸಿದ್ಧತೆ

ವಿಜಯವಾಣಿ (4)
Published on

ಅಯೋಧ್ಯೆ ರಾಮಮಂದಿರದಲ್ಲಿ ಸಂಭ್ರಮ | 11ರಿಂದ 13ರ ವರೆಗೆ ವಿವಿಧ ಕಾರ್ಯಕ್ರಮ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ (ಬಾಲರಾಮ) ಮೂರ್ತಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವಕ್ಕೆ ನಗರ ಸಡಗರದಿಂದ ಸಜ್ಜುಗೊಳ್ಳುತ್ತಿದೆ.

ಕಳೆದ ವರ್ಷದ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದ ಜನಸಾಮಾನ್ಯರನ್ನು ಶನಿವಾರದಿಂದ ಸೋಮವಾರವರೆಗೆ (ಜನವರಿ 11-13) ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರನ್ನೂ ಆಹ್ವಾನಿಸಲಾಗಿದೆ.

ಅಂಗದ್ ತೀಲಾ ಪ್ರದೇಶದಲ್ಲಿ 5,000 ಜನರಿಗೆ ಅವಕಾಶವಿರುವ ಜರ್ಮನ್ ಹ್ಯಾಂಗರ್ ಟೆಂಟ್​ಅನ್ನು ಸ್ಥಾಪಿಸಲಾಗಿದೆ. ಶಾಸ್ತ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ವಿುಕ ವಿಧಿವಿಧಾನಗಳು ಮತ್ತು ಪೆವಿಲಿಯನ್ ಹಾಗೂ ಯಜ್ಞಶಾಲೆಯಲ್ಲಿ ಪ್ರತಿನಿತ್ಯ ನಡೆಯುವ ರಾಮ ಕಥಾ ಸಂಕೀರ್ತನೆಯಲ್ಲಿ ಸಾಮಾನ್ಯ ಜನರು ಕೂಡ ಭಾಗವಹಿಸ ಬಹುದಾಗಿದೆ. ಅಂಗದ್ ತೀಲಾದಲ್ಲಿ ನಡೆಯುವ ಮೂರು ದಿನಗಳ ಕಾರ್ಯಕ್ರಮಗಳನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳ ಬಹುದಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.

2024ರ ಜನವರಿ 22ರಂದು ನಡೆದ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಲು ಆಗದಿದ್ದವರ ಸಹಿತ 110 ವಿಐಪಿಗಳು ಹಾಗೂ ಅತಿಥಿಗಳಿಗೆ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಗಿದೆ ಎಂದು ರಾಯ್ ತಿಳಿಸಿದ್ದಾರೆ.

ಸಿಎಂ ಯೋಗಿ ಅಭಿಷೇಕ

ರಾಮ ಮಂದಿರದಲ್ಲಿ ಜನವರಿ 11ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಮಲಲ್ಲಾಗೆ ಅಭಿಷೇಕ ನಡೆಸಲಿದ್ದಾರೆಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.

ರಾಮಚರಿತಮಾನಸ ಪ್ರವಚನ

ಪ್ರತಿ ದಿನ ಮಧ್ಯಾಹ್ನ 2 ಗಂಟೆಗೆ ರಾಮ ಕಥಾ ಅಧಿವೇಶನ ಆರಂಭವಾಗುತ್ತದೆ. ನಂತರ ರಾಮಚರಿತಮಾನಸ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಭಾಗವಹಿಸುವವರು ಭಕ್ತಿ ಮತ್ತು ಆಧ್ಯಾತ್ಮಿಕತೆಯ ಅನುಭೂತಿ ಪಡೆಯುವಂತಾಗಲು ನಿತ್ಯ ಬೆಳಿಗ್ಗೆ ಪ್ರಸಾದ ವಿತರಣೆಗೂ ಟ್ರಸ್ಟ್ ಯೋಜಿಸಿದೆ.

ಮೋದಿ ನೇತೃತ್ವದಲ್ಲಿ ಪ್ರಕ್ರಿಯೆ

2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠೆ ನೆರವೇರಿಸಲಾಗಿತ್ತು. ದೇಶದಾದ್ಯಂತ ಲಕ್ಷಾಂತರ ಜನರು ಟಿವಿ ಪರದೆಗಳ ಮೇಲೆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಿದ್ದರು.

ಭರದ ಅಲಂಕಾರ

ಯಜ್ಞ ಸ್ಥಳದ ಬಳಿ ಅಲಂಕಾರ ಪ್ರಕ್ರಿಯೆ ಭರದಿಂದ ಸಾಗಿದೆ ಎಂದು ಟ್ರಸ್ಟ್​ನ ಮಾಧ್ಯಮ ಕಚೇರಿ ತಿಳಿಸಿದೆ. ಪ್ರಾಣಪ್ರತಿಷ್ಠೆ ಸಡಗರಕ್ಕೆ ಯಜ್ಞಶಾಲೆ ಮತ್ತು ಪೆವಿಲಿಯನ್ ಪ್ರಮುಖ ತಾಣಗಳಾಗಿ ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರೂ ಅವುಗಳಲ್ಲಿ ಭಾಗವಹಿಸಲು ಅಪರೂಪದ ಅವಕಾಶ ಕಲ್ಪಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net