ಕೊರೊನಾ ವೈರಸ್​ ಆತಂಕ: ಚೀನಾದ ಹುಬೈ ಪ್ರಾಂತ್ಯದಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯ ಆರಂಭ

China 28 jan 20
Published on

ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್​ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆ ದೇಶದಲ್ಲಿರುವ ಬೇರೆ ದೇಶಗಳ ಜನರೂ ಸಹ ಆತಂಕ ಪಡುವಂತಾಗಿದೆ. ಅಷ್ಟೇ ಅಲ್ಲದೆ ಚೀನಾಕ್ಕೆ ಭೇಟಿ ಕೊಟ್ಟು ತಮ್ಮ ದೇಶಗಳಿಗೆ ಮರಳಿದವರ ಆರೋಗ್ಯದ ಮೇಲೆ ಆಯಾ ದೇಶಗಳ ಆಡಳಿತಗಳು ನಿಗಾ ವಹಿಸಿವೆ.

ಚೀನಾದಲ್ಲಿ ಹುಬೈ, ವುಹಾನ್​ ಸೇರಿ ಹಲವು ಪ್ರದೇಶಗಳಲ್ಲಿ ಈ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು ಅಂತಹ ಸೂಕ್ಷ್ಮ ನಗರಗಳನ್ನು ಈಗಾಗಲೇ ನಿರ್ಬಂಧಿಸಲಾಗಿದೆ.

ಹುಬೈ ಪ್ರಾಂತ್ಯದಲ್ಲಿ ವುಹಾನ್​ ಸೇರಿ ಒಟ್ಟು 17 ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಸೋಂಕು ದಿನೇದಿನೇ ಹೆಚ್ಚುತ್ತಿರುವುದರಿಂದ ಅಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಈ ಬಗ್ಗೆ ಭಾರತ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.

ಸಚಿವಾಲಯದ ವಕ್ತಾರ ರವೀಶ್​ ಕುಮಾರ್​ ಮಾತನಾಡಿ, ಬೀಜಿಂಗ್​ನಲ್ಲಿರುವ ಭಾರತದ ರಾಯಭಾರ ಕಚೇರಿ ಚೀನಾದ ಸರ್ಕಾರ ಜತೆ ಸಂಪರ್ಕದಲ್ಲಿದೆ. ಹುಬೈ ಪ್ರಾಂತ್ಯದಲ್ಲಿರುವ ವಿದ್ಯಾರ್ಥಿಗಳು ಸೇರಿ ಎಲ್ಲ ಭಾರತೀಯರನ್ನು ಅಲ್ಲಿಂದ ಸ್ಥಳಾಂತರಿಸುವ ಕಾರ್ಯವನ್ನು ಈಗಾಗಲೇ ಪ್ರಾರಂಭ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹಾಗೇ ಕಾಲಕಾಲಕ್ಕೆ ಮಾಹಿತಿಗಳನ್ನು ಅಪ್​ಡೇಟ್​ ಮಾಡುತ್ತೇವೆ ಎಂದೂ ಹೇಳಿದ್ದಾರೆ.

ಸದ್ಯ ಭಾರತೀಯ ಧ್ವಜವನ್ನು ಹೊತ್ತಿರುವ ಏರ್​ ಇಂಡಿಯಾ ವಿಮಾನವೊಂದು ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಕ್ಕಾಗಿ ಚೀನಾಕ್ಕೆ ಹೊರಡಲು ಸಿದ್ಧವಾಗಿದ್ದು, ಅಧಿಕೃತ ಆದೇಶಕ್ಕಾಗಿ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net