

ಗ್ಯಾಂಗ್ಟಕ್: ಐದು ವರ್ಷದ ಬಳಿಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಚೀನಾ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಕ್ಕಿಂ ಸರ್ಕಾರ ಯಾತ್ರೆಗೆ ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದೆ. ಹಿಂದುಗಳು, ಜೈನರು ಮತ್ತು ಬೌದ್ಧರಿಗೆ ಕೈಲಾಸ ಮಾನಸ ಸರೋವರ ಯಾತ್ರೆ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್ ಮತ್ತು ನಾಥು ಲಾ ಬಳಿಕ ಯಾತ್ರಿಕರಿಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರ ಈ ವರ್ಷದ ಜೂನ್ನಿಂದ ಆಗಸ್ಟ್ವರೆಗೆ ಉತ್ತರಾಖಂಡದ ಲಿಪುಲೇಖ್ ಪಾಸ್ ಮತ್ತು ಸಿಕ್ಕಿಂನ ನಾಥುಲಾ ಪಾಸ್ ಮೂಲಕ ಎರಡು ಮಾರ್ಗದಲ್ಲಿ ಯಾತ್ರೆ ನಡೆಸುವುದಾಗಿ ವಿದೇಶಾಂಗ ಸಚಿವಾ ಲಯ ತಿಳಿಸಿತ್ತು. ಸಿಕ್ಕಿಂ ಶಾಂತಿಯುತ ರಾಜ್ಯವಾಗಿದ್ದು, ನಾಥುಲಾ ಗಡಿಯ ಮೂಲಕ ಟಿಬೆಟ್ಗೆ ಪ್ರಯಾಣಿಸುವವರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಥಿನ್ಲೆ ತ್ಸೆರಿಂಗ್ ಭುಟಿಯಾ ತಿಳಿಸಿದ್ದಾರೆ. ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಭಾರತೀಯ ಯಾತ್ರಿಕರಿಗೆ ಬಂದ್ ಮಾಡಿತ್ತು. ಕೆಲವು ತಿಂಗಳ ಹಿಂದೆ ಚೀನಾ ಸರ್ಕಾರ ಮತ್ತೆ ಯಾತ್ರೆ ಆರಂಭಕ್ಕೆ ಅನುಮತಿ ನೀಡಿತ್ತು.