

ಕರೊನಾ ಸೋಂಕಿನ ಎರಡನೆಯ ಅಲೆ ನಿಯಂತ್ರಣಕ್ಕೆ ಬಂದಿದೆ. ಆದರೂ, ರಾಜ್ಯದಲ್ಲಿ ಜೂನ್ 7ರಿಂದ ವರದಿಯಾಗಿರುವ ಕೋವಿಡ್ ಪ್ರಕರಣಗಳಲ್ಲಿ ನಿತ್ಯ ಸರಾಸರಿ ಶೇಕಡ 6ರಷ್ಟು ಮಕ್ಕಳಲ್ಲಿ ಸೋಂಕು ಕಂಡುಬಂದಿದೆ. ಹಾಗಾಗಿ ಮೂರನೆಯ ಅಲೆಗೂ ಮುನ್ನವೇ ಮಕ್ಕಳ ಬಗೆಗೆ ಆತಂಕ ಹೆಚ್ಚಿದೆ. ಪಾಲಕರು ಮಕ್ಕಳ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಮಕ್ಕಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ, ಕೋವಿಡ್ ಸಂಭಾವ್ಯ ಮೂರನೆಯ ಅಲೆ ತಡೆಯುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಡಿಕೊಳ್ಳಬೇಕಾಗಿರುವ ಸಿದ್ಧತೆಗಳ ಬಗ್ಗೆ ಡಾ.ದೇವಿ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದ್ದು, ವಿಷಯವಾರು ವಿವರಗಳನ್ನು ನೀಡಿದೆ. ಮುಖ್ಯವಾಗಿ, ಮಕ್ಕಳಲ್ಲಿ ಪೌಷ್ಟಿಕಮಟ್ಟ ವರ್ಧನೆ, ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಹೆಚ್ಚಳ, ಆಸ್ಪತ್ರೆಗಳ ಮೂಲಸೌಕರ್ಯ ವೃದ್ಧಿ ಮಾಡುವುದು ಅವಶ್ಯ ಎಂದು ತಿಳಿಸಿದೆ. ಅಲ್ಲದೆ, ವೈದ್ಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುವ ಕುರಿತು ಸಮಿತಿ ಶಿಫಾರಸು ಮಾಡಿದೆ.
ಶಾಲೆಗಳನ್ನು ಆರಂಭಿಸದಿದ್ದಲ್ಲಿ ಅಪೌಷ್ಟಿಕತೆ, ಬಾಲಕಾರ್ವಿುಕ ಪದ್ಧತಿ, ಬಾಲ್ಯವಿವಾಹ, ಮಕ್ಕಳ ಕಳ್ಳಸಾಗಣೆ ಹೆಚ್ಚುವ ಸಾಧ್ಯತೆಗಳ ಬಗ್ಗೆ ಸಮಿತಿ ಕಳವಳ ವ್ಯಕ್ತಪಡಿಸಿದೆ. ಡಿಜಿಟಲ್ ಕಲಿಕೆಯಿಂದ ಗುಣಮಟ್ಟದಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ, ಬದಲಿಗೆ ಅದು ಹಲವು ಸಮಸ್ಯೆಗಳನ್ನು ಸೃಷ್ಟಿಸಿರುವ ಬಗ್ಗೆ ಸಮಿತಿ ಬೊಟ್ಟು ಮಾಡಿದೆ. ಆದರೆ, ಸರ್ಕಾರ 1ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಸದ್ಯದ ಸನ್ನಿವೇಶದಲ್ಲಿ ಶಾಲೆ ಆರಂಭಿಸಲು ಒಲವು ತೋರಿಲ್ಲ. ಪರಿಸ್ಥಿತಿ ಅವಲೋಕಿಸಿ ಹಂತ-ಹಂತವಾಗಿ ಶಾಲೆ ತೆರೆಯುವ ಯೋಚನೆ ಸರ್ಕಾರದ್ದು. 3ನೇ ಅಲೆ ನಿರ್ವಹಣೆಗೆ ಕಾಪೋರೇಟ್ ಸಂಸ್ಥೆಗಳು, ವೃತ್ತಿಪರ ಸಂಸ್ಥೆಗಳು, ಆಸ್ಪತ್ರೆ ಗುಂಪು, ಎನ್ಜಿಒಗಳು, ಸಾರ್ವಜನಿಕ ಸಹಭಾಗಿತ್ವ ಪಡೆಯುವಂತೆಯೂ ಸಮಿತಿ ಸಲಹೆ ನೀಡಿರುವುದು ಗಮನಾರ್ಹ.
ತಜ್ಞರ ವರದಿಯನ್ನು ಪರಾಮಶಿಸಿ ಅದರ ಜಾರಿ ನಿಟ್ಟಿನಲ್ಲಿ ಸರ್ಕಾರ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಎರಡನೆಯ ಅಲೆಯ ಅಬ್ಬರ ಹೆಚ್ಚಾದಾಗ, ಅದನ್ನು ಎದುರಿಸಲು ಸೂಕ್ತ ವ್ಯವಸ್ಥೆಗಳಿಲ್ಲದೆ ಪರದಾಡಿದ ಸನ್ನಿವೇಶ ಮರೆಯುವಂತಿಲ್ಲ. 15 ದಿನಗಳಲ್ಲೇ ಪರಿಸ್ಥಿತಿ ಕೈಮೀರಿದ್ದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ, ವೈದ್ಯಕೀಯ ಆಮ್ಲಜನಕ, ಔಷಧ ಕೊರತೆ ತೀವ್ರವಾಗಿ, ರೋಗಿಗಳು ಸಂಕಷ್ಟಕ್ಕೀಡಾದರು. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಸೋಂಕನ್ನು ಎದುರಿಸಲು ಬೇಕಾದ ಸೌಕರ್ಯಗಳಿಲ್ಲ, ಜನರಲ್ಲಿ ಸೂಕ್ತ ಮಾಹಿತಿಯೂ ಇಲ್ಲ. ಈ ಕೊರತೆ ನಿವಾರಿಸಲು ಹಳ್ಳಿಗಳತ್ತ ಸರ್ಕಾರ ಗಮನಹರಿಸಬೇಕಿದೆ. ಲಾಕ್ಡೌನ್, ಸುರಕ್ಷಾ ನಿಯಮಗಳ ಪಾಲನೆ ಸೇರಿದಂತೆ ಹಲವು ಕ್ರಮಗಳ ಮೂಲಕ ಸೋಂಕು ಪ್ರಸರಣ ಈಗ ನಿಯಂತ್ರಣಕ್ಕೆ ಬಂದಿರುವುದು ಸಮಾಧಾನಕರ. ಆದರೆ, ಮೂರನೆಯ ಅಲೆ ಬಂದರೆ ಮತ್ತೆ ಹಳೆಯ ಸಮಸ್ಯೆಗಳು ಮರುಕಳಿಸದಂತೆ, ಆರೋಗ್ಯ ವ್ಯವಸ್ಥೆ ಮೇಲಿನ ಒತ್ತಡ ಹೆಚ್ಚದಂತೆ ಈಗಿನಿಂದಲೇ ಸೂಕ್ತ ಕ್ರಮ ಕೈಗೊಂಡರೆ ಸಂಭಾವ್ಯ ಸಮಸ್ಯೆಯನ್ನು ಮಣಿಸಬಹುದು. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕಿದ್ದು, ಇದಕ್ಕಾಗಿ ಸೂಕ್ತ ಅರಿವು ಮೂಡಿಸಬೇಕಿದೆ. ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕಿದೆ.