ಸರ್ಕಾರದಿಂದ ಬಿ ಖಾತೆ ನೀಡಲು ಸಿದ್ಧತೆ

siddappa
ಕೆ.ಸಿದ್ದಪ್ಪ
Published on

ಸಾಗರ: ತಹಸೀಲ್ದಾರ್ ಕನ್ವರ್ಷನ್ ಲೇಔಟ್ ಸಮಸ್ಯೆ ಪರಿಹಾರಕ್ಕೆ ಕಾಲ ಸನಿಹವಾಗಿದೆ. ಇಂತಹ ಲೇಔಟ್‌ನ ನಿವಾಸಿಗಳಿಗೆ ಬಿ ಖಾತಾ ನೀಡಲು ಸರ್ಕಾರ ಅಗತ್ಯ ಸಿದ್ಧತೆ ನಡೆಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ಸಿದ್ದಪ್ಪ ಹೇಳಿದರು.

ಫೆ.10ರೊಳಗೆ ಬಿ ಖಾತಾ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದ್ದಾರೆ. ಅನೇಕ ವರ್ಷಗಳಿಂದ ತಹಸೀಲ್ದಾರ್ ಕನ್ವರ್ಷನ್ ಲೇಔಟ್‌ನಲ್ಲಿ ಮನೆ ಕಟ್ಟಿಕೊಂಡವರು, ನಿವೇಶನ ಖರೀದಿಸಿದವರು ಅಭದ್ರತೆಯಲ್ಲಿದ್ದರು. ಇವರಿಗೆ ಸ್ಥಳೀಯ ಸಂಸ್ಥೆಗಳಿಂದ ಸೇಲ್ ಸರ್ಟಿಫಿಕೇಟ್, ಖಾತೆ ಯಾವುದೂ ಆಗುತ್ತಿರಲಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಅಭಿವೃದ್ಧಿ ಶುಲ್ಕ ಪಾವತಿಸಿಯೂ ಇವರು ಸರ್ಕಾರಿ ಸೌಲಭ್ಯ, ಬ್ಯಾಂಕ್ ಸಾಲ ಸಿಗದೆ ಪರದಾಡುತ್ತಿದ್ದರು. ಇದೀಗ ರಾಜ್ಯ ಸರ್ಕಾರ ಇವರಿಗೆ ಬಿ ಖಾತಾ ನೀಡುವುದರಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಗರ ನಗರ ವ್ಯಾಪ್ತಿಯಲ್ಲಿ ಇಂತಹ 4 ಸಾವಿರ ಪ್ರಕರಣಗಳಿವೆ. ಈ ಪೈಕಿ ಸಾವಿರಕ್ಕೂ ಹೆಚ್ಚು ಜನ ಮನೆ ಕಟ್ಟಿಕೊಂಡಿದ್ದಾರೆ. 3 ಸಾವಿರಕ್ಕೂ ಹೆಚ್ಚು ಜನ ನಿವೇಶನ ಖರೀದಿಸಿದ್ದಾರೆ. ನಿವಾಸಿಗಳಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಘಟಕದಿಂದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಪೌರಾಡಳಿತ ಸಚಿವ ರಹೀಂ ಖಾನ್ ಅವರನ್ನು ಭೇಟಿಯಾಗಿ ಈ ವಿಷಯ ಕುರಿತು ಮನವರಿಕೆ ಮಾಡಿಕೊಡಲಾಗಿತ್ತು. ಶಾಸಕ ಗೋಪಾಲಕೃಷ್ಣ ಬೇಳೂರು ಸಹ ಬೆಂಬಲ ನೀಡಿದ್ದರು. ಮುಖ್ಯಮಂತ್ರಿಗಳು ತಕ್ಷಣ ಬಿ ಖಾತಾ ಮಾಡಿಕೊಡುವ ಬಗ್ಗೆ ಗೆಜೆಟ್‌ನಲ್ಲಿ ಪ್ರಕಟಿಸಿ, ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ದುರ್ಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net