ಅವಳಿ ನಗರ ವಿಕಾಸಕ್ಕೆ ನೀಲಿನಕ್ಷೆ ತಯಾರಿ:ಸುಂದರೇಶ್

Sundaresh
ಎಚ್.ಎಸ್.ಸುಂದರೇಶ್, ಸೂಡಾ ಅಧ್ಯಕ್ಷ
Published on

ಶಿವಮೊಗ್ಗ: ಮುಂದಿನ 15 ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳ ಸರ್ವಾಂಗೀಣ ವಿಕಾಸಕ್ಕೆ ನೀಲಿನಕ್ಷೆ ತಯಾರಿಸಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದ್ದಾರೆ.

ಅಮೃತ್ ಯೋಜನೆಯಡಿ 2031ರವರೆಗೆ ಅಭಿವೃದ್ಧಿಯ ರೇಖೆ ನಿಗದಿಪಡಿಸಲಾಗಿದೆ. ಆದರೆ, ಪ್ರಾಧಿಕಾರವು 2041ರ ರೇಖೆ ನಿಗದಿಪಡಿಸಿಕೊಂಡು ಇಂದಿನ ಜನಸಂಖ್ಯೆಗೆ ಹೆಚ್ಚುವರಿಯಾಗಿ 15 ಲಕ್ಷ ಜನಸಂಖ್ಯೆ ನಿರೀಕ್ಷಿಸಿ ನಗರಾಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಕ್ರಿಯಾ ಯೋಜನೆಯಲ್ಲಿ ವಿಶಾಲ ರಸ್ತೆಗಳ ನಿರ್ಮಾಣ, ಉದ್ಯಾನಗಳು, ವಿದ್ಯುತ್ ಸಂಪರ್ಕ, ಶುದ್ಧ ಕುಡಿಯುವ ನೀರು, ಚರಂಡಿ, ಆರೋಗ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ತರಬೇತಿ ಕೇಂದ್ರಗಳು, ಪ್ರವಾಸೋದ್ಯಮ, ಉದ್ಯೋಗ ಸೃಜನೆ, ವರ್ತುಲ ರಸ್ತೆಗಳ ನಿರ್ಮಾಣ ಮುಂತಾದ ವಿಷಯಗಳಿಗೆ ಒತ್ತು ನೀಡಲಾಗಿದೆ ಎಂದರು.
2012ರಲ್ಲಿ ಪ್ರಸ್ತಾಪಿತ ನಗರದ ಹೊರವರ್ತುಲ ರಸ್ತೆ ನಿರ್ಮಾಣದ ಬಳಿಕ ಉಳಿದ ರಸ್ತೆಯ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗುವುದು. ಶಿವಮೊಗ್ಗ, ಭದ್ರಾವತಿ, ಸೋಗಾನೆ, ಹೊಳೆಹನಸವಾಡಿ ಶಿವಮೊಗ್ಗ ನಗರದ ನಾಲ್ಕು ದಿಕ್ಕುಗಳಲ್ಲಿಯೂ ನಗರಾಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಎಂಟು ಸಾವಿರ ಅರ್ಜಿ: ಊರುಗಡೂರಿನಲ್ಲಿ ನಿರ್ಮಾಣವಾಗಿರುವ ಬಡಾವಣೆಯ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಈಗಾಗಲೇ ಸುಮಾರು ಎಂಟು ಸಾವಿರ ಅರ್ಜಿಗಳು ಬಂದಿವೆ. ಭೂಮಾಲೀಕರು, ಪರಿಶಿಷ್ಟ ಜಾತಿ-ಪಂಗಡದವರು, ಹಿಂದುಳಿದ ವರ್ಗದವರಿಗೆ, ನೌಕರರಿಗೆ, ಸಾಮಾನ್ಯ ವರ್ಗದವರಿಗೆ, ವಿಕಲಾಂಗರಿಗೆ, ಕಲೆ, ವಿಜ್ಞಾನ, ಕ್ರೀಡೆ, ಮಾಧ್ಯಮ, ವಿವಿಧ ಕ್ಷೇತ್ರಗಳ ಸಾಧಕರಿಗೆ ನಿರ್ದಿಷ್ಟ ಸಂಖ್ಯೆಯಲ್ಲಿ ನಿವೇಶನ ಹಂಚಿಕೆ ಮಾಡಬೇಕಾಗುತ್ತದೆ ಎಂದು ಸುಂದರೇಶ್ ಹೇಳಿದರು.
ಪ್ರಾಧಿಕಾರದಿಂದಲೇ ಗುಂಪುಮನೆ ಸಮುಚ್ಛಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಊರುಗಡೂರಿನಲ್ಲಿ ನಾಲ್ಕು ಎಕರೆ, ಸೋಮಿನಕೊಪ್ಪ-ಜೆ.ಎಚ್.ಪಟೇಲ್ ಬಡಾವಣೆಗಳಲ್ಲಿ 1.10 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಗೋಪಾಲಗೌಡ ಬಡಾವಣೆ ಹಾಗೂ 100ಅಡಿ ರಸ್ತೆಯಲ್ಲಿ ಪ್ರಾಧಿಕಾರದಿಂದ ವಾಣಿಜ್ಯ ಮಾಲ್‌ಗಳನ್ನು ನಿರ್ಮಿಸಲಾಗುವುದು ಎಂದರು.
ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಎಚ್.ರವಿಕುಮಾರ್, ಮಹ್ಮದ್ ಯೂಸೂಫ್, ರೇಣುಕಮ್ಮ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net