

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ 4ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿಗಿಳಿದಿರುವುದು ಕದನ ಕಣ ಕಾವೇರುವಂತೆ ಮಾಡಿದೆ. ಮತಗಳ ಕೊರತೆ ಇದ್ದರೂ ಮೂರೂ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸಿ ತಮ್ಮ ಸಾಮರ್ಥ್ಯ ಸಾಬೀತಿಗೆ ಸಜ್ಜಾಗಿವೆ.
ಕಾಂಗ್ರೆಸ್ ಹಿಂದೆ ಸರಿಯಬಹುದೆಂದು ಜೆಡಿಎಸ್, ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್ ತೆಗೆಯಬಹುದೆಂಬ ಕಾಂಗ್ರೆಸ್ ನಿರೀಕ್ಷೆ ಹುಸಿಯಾಗಿವೆ. ಬಿಜೆಪಿ ಲೆಹರ್ ಸಿಂಗ್ ಸಿರೋಯಿ, ಕಾಂಗ್ರೆಸ್ ಮನ್ಸೂರ್ ಆಲಿ ಖಾನ್ ಹಾಗೂ ಜೆಡಿಎಸ್ ಕುಪೇಂದ್ರ ರೆಡ್ಡಿ ಅವರನ್ನು ಹುರಿಯಾಳಾಗಿಸಿವೆ. ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಸೇರಿದ ಮನ್ಸೂರ್ ಆಲಿ ಖಾನ್ ಅವರನ್ನು ಅಖಾಡಕ್ಕಿಳಿ, ಜೆಡಿಎಸ್ ಜಾತ್ಯತೀತೆಗೆ ಸವಾಲೊಡ್ಡಿದೆ. ಇದು ಜೆಡಿಎಸ್ಗೆ ನೀರಿಳಿದಯ ಗಂಟಲಿನಲ್ಲಿ ಕಡುಬು ತುರುಕಿದಂತಾಗಿದೆ. ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿರುವುದು ಜೆಡಿಎಸ್ಗೆ ಆಘಾತ ಉಂಟು ಮಾಡಿದೆ. ಕೋಮುವಾದಿ ಶಕ್ತಿಗಳನ್ನು ದೂರವಿಡಲು ಕಾಂಗ್ರೆಸ್ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಬಹುದೆಂಬ ಜೆಡಿಎಸ್ ನಿರೀಕ್ಷೆ ತಲೆಕೆಳಗಾಗಿದೆ.
ಅತಂತ್ರ ಸ್ಥಿತಿಯಲ್ಲಿ ಜೆಡಿಎಸ್: ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲಾಗದ, ಇತ್ತ ಬಿಜೆಪಿಯನ್ನೂ ಬೆಂಬಲಿಸಲಾಗದ, ಅತ್ತ ಕಾಂಗ್ರೆಸ್ ಜತೆಗೂ ಕೈಜೋಡಿಸಲಾಗದ ಸ್ಥಿತಿಗೆ ಜೆಡಿಎಸ್ ಬಂದು ತಲುಪಿದೆ. ಬಿಜೆಪಿ ಬೆಂಬಲಿಸಿದರೆ ಬಿಜೆಪಿ ಬಿ ಟೀಮ್ ಎಂಬ ಅಪವಾದ ಎದುರಿಸಬೇಕಾಗುತ್ತದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ ಈ ಆರೋಪವನ್ನು ಜೀರ್ಣಿಸಿಕೊಳ್ಳಲು ಜೆಡಿಎಸ್ಗೆ ಇನ್ನೂ ಆಗಿಲ್ಲ. ಈಗ ಮತ್ತದೇ ಪರಿಸ್ಥಿತಿಯನ್ನು ಮೈಮೇಲೆ ಎಳೆದುಕೊಳ್ಳಲು ಜೆಡಿಎಸ್ ತಯಾರಿಲ್ಲ.
ಒಗ್ಗಟ್ಟು ಪ್ರದರ್ಶಿಸಲು ಒದ್ದಾಟ: 2023ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್ನ ಕೆಲವು ಶಾಸಕರು ಕಾಂಗ್ರೆಸ್ ಕಡೆಗೆ ತುಡಿಯುತ್ತಿದ್ದರೆ ಮತ್ತೆ ಕೆಲವರು ಬಿಜೆಪಿ ಕಡೆಗೆ ಒಲವು ತೋರಿಸಿದ್ದಾರೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಇರುವ ಮತಗಳನ್ನು ಉಳಿಸಿಕೊಂಡು ಒಗ್ಗಟ್ಟು ಪ್ರದರ್ಶಿಸುವುದೇ ಜೆಡಿಎಸ್ಗೆ ಸವಾಲಾಗಿ ಪರಿಣಮಿಸಿದೆ.
ವಿಶ್ವಾಸಕ್ಕೆ ಪಡೆಯುವ ಪ್ರಯತ್ನ: ಪಕ್ಷದಲ್ಲಿ ನಾಲ್ಕಾರು ಮಂದಿ ಶಾಸಕರಲ್ಲಿ ಅಸಮಾಧಾನವಿದೆ. ಇವರು ರಾಜ್ಯಸಭೆ ಚುನಾವಣೆಯಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಈ ಅತೃಪ್ತ ಶಾಸಕರ ಮನವೊಲಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನೂ ಕುಮಾರಸ್ವಾಮಿ ಆರಂಭಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾದರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು. ಈಗ ಇವರಿಬ್ಬರ ನಡುವೆ ಹೊಂದಾಣಿಕೆಯಾಗದಿರುವುದು ಬಿಜೆಪಿಗೆ ಗೆಲುವಿಗೆ ದಾರಿ ಸುಗಮ ಮಾಡಿಕೊಟ್ಟಂತಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಆಪರೇಷನ್ ಜೆಡಿಎಸ್?: ಜೆಡಿಎಸ್ನಲ್ಲಿನ ಅತೃಪ್ತ ಶಾಸಕರನ್ನು ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಜಿದ್ದಿಗೆ ಬಿದ್ದಿವೆ. ಕಾಂಗ್ರೆಸ್ ಜಮೀರ್ ಅಹಮ್ಮದ್ ನೇತೃತ್ವದಲ್ಲಿ ಅಪರೇಷನ್ ಜೆಡಿಎಸ್ಗೆ ಮುಂದಡಿ ಇಟ್ಟಿದೆ. ಬಿಜೆಪಿ ಕೂಡ ಈ ನಿಟ್ಟಿನಲ್ಲಿ ಚಾಣಾಕ್ಷ ನಡೆ ಅನುಸರಿಸುತ್ತಿದೆ. ಇದು ಜೆಡಿಎಸ್ಗೆ ಇಕ್ಕಟ್ಟು ತಂದಿಟ್ಟಿದೆ ಎಂದು ಹೇಳಲಾಗುತ್ತಿದೆ.
ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಸಿದ್ದರಾಮಯ್ಯ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದೇನೆ ಎಂದು ಬೀಗುತ್ತಿದ್ದಾರೆ. ಕಲ್ಲು ಎತ್ತಿಕೊಂಡು ಅವರೇ ಹೊಡೆದುಕೊಂಡಿದ್ದಾರೆ ಎಂಬುದು ಹಾಗೂ ಬಿಜೆಪಿಯ ಬಿ ಟೀಮ್ ಯಾರು ಎಂಬುದು ಜೂ. 10ರಂದು ಗೊತ್ತಾಗಲಿದೆ. | ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ಹುಬ್ಬಳ್ಳಿ: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಷಯದಲ್ಲಿ ನಾನು ಕಾಂಗ್ರೆಸ್ ವರಿಷ್ಠರೊಂದಿಗೆ ಈವರಗೆ ರ್ಚಚಿಸಿಲ್ಲ. ನಮ್ಮ ಅಭ್ಯರ್ಥಿಗೆ 2ನೇ ಪ್ರಾಶಸ್ಱದ ಮತ ಕೊಡಿ ಎಂದು ಯಾರನ್ನೂ ಕೇಳಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಹುಬ್ಬಳ್ಳಿಯಲ್ಲಿ ಶನಿವಾರ ಸಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ನ 32 ಮತಗಳಿವೆ. 4-5 ಜನರಿಗೆ ಅಸಮಾಧಾನ ಇರಬಹುದು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದೇವೆ. 2016ರ ವಿದ್ಯಮಾನ ಈ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ಮರುಕಳಿಸುವುದಿಲ್ಲ. ಕಾಂಗ್ರೆಸ್ನ 2ನೇ ಅಭ್ಯರ್ಥಿ ಗೆಲ್ಲುವ ಪ್ರಶ್ನೆಯೇ ಇಲ್ಲ. ಚುನಾವಣೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ಗೊಂದವಿಲ್ಲ. ಕಾಂಗ್ರೆಸ್, ಬಿಜೆಪಿಯಲ್ಲಿ ನನಗೂ ಆತ್ಮೀಯರು ಇದ್ದಾರೆ ಎಂದರು.
ಹೊರಟ್ಟಿಗೆ ಸಾಧ್ಯವಿರಲಿಲ್ಲವೆ?: ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ 48 ಸಾವಿರ ಶಿಕ್ಷಕರ ನೇಮಕ, 1,048 ಪ್ರೌಢಶಾಲೆಗಳಿಗೆ ಅನುಮತಿ ತಮ್ಮ ಸಾಧನೆ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಇವು ನಾನು ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡು ತೀರ್ವನಗಳು. ಈಗ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಸಭಾಪತಿ ಆಗಿದ್ದಾಗ ಸರ್ಕಾರದ ಮೇಲೆ ಒತ್ತಡ ಹೇರಿ ಮಾಡಿಸಲು ಸಾಧ್ಯವಿರಲಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಎಚ್ಡಿಕೆ ಪ್ರಚಾರ ಆರಂಭ: ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರರ ಚುನಾವಣಾ ಕಣ ರಂಗೇರಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಏಳು ಬಾರಿ ಗೆಲ್ಲುವ ಮೂಲಕ ಬಸವರಾಜ ಹೊರಟ್ಟಿ ದಾಖಲೆ ಬರೆದಿದ್ದಾರೆ. ಈ ಬಾರಿ ಅವರು ಜೆಡಿಎಸ್ ತ್ಯಜಿಸಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಶ್ರೀಶೈಲ ನಿಂಗಪ್ಪ ಗಡದಿನ್ನಿ ಅವರನ್ನು ಕಣಕ್ಕಿಳಿಸಿದ್ದು, ಅಭ್ಯರ್ಥಿ ಗೆಲುವಿಗೆ ಕುಮಾರಸ್ವಾಮಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇನ್ನೂ ಎರಡು ದಿನ ಕ್ಷೇತ್ರದಲ್ಲಿ ಸಂಚರಿಸಿ ಪ್ರಚಾರ ನಡೆಸಲಿದ್ದಾರೆ. ಈ ಕ್ಷೇತ್ರದಲ್ಲಿ ಇರುವರೆಗೆ ಬಿಜೆಪಿ ಒಂದೇ ಒಂದು ಬಾರಿಯೂ ಗೆದ್ದ ಉದಾಹರಣೆ ಇಲ್ಲ. ಆದರೆ, ಪ್ರತಿ ಚುನಾವಣೆಯಲ್ಲೂ ಬಸವರಾಜ ಹೊರಟ್ಟಿಯವರಿಗೆ ತೀವ್ರ ಪೈಪೋಟಿ ನೀಡಿದ್ದಂತೂ ಸತ್ಯ. ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಚಂದ್ರಶೇಖರ ಇ. ಲೋಣಿ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದಿಂದ ಎಚ್.ಕೆ.ರಾಮು ಅವರಿಗೆ ಟಿಕೆಟ್ ನೀಡಲಾಗಿದೆ. ರಾಮುಗೆ ಟಿಕೆಟ್ ನೀಡಿರುವುದಕ್ಕೆ ಮರಿತಿಬ್ಬೇಗೌಡ ಜೆಡಿಎಸ್ ವರಿಷ್ಠರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಈಗ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಇಲ್ಲೂ ಕೂಡ ಕುಮಾರಸ್ವಾಮಿ ತಮ್ಮ ಅಭ್ಯರ್ಥಿ ಗೆಲುವಿಗೆ ಬೆವರು ಹರಿಸಬೇಕಿದೆ.
ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಮೂರನೇ ಸ್ಥಾನ ಗೆಲ್ಲುವ ಅವಕಾಶ ಕಳೆದುಕೊಳ್ಳದಿರಲು ಆಡಳಿತಪಕ್ಷ ಬಿಜೆಪಿ ನಿರ್ಧರಿಸಿದೆ. ರಾಜ್ಯಸಭೆ ಚುನಾವಣೆ, ವಿಧಾನ ಪರಿಷತ್ ನಾಲ್ಕು ಕ್ಷೇತ್ರಗಳ ಚುನಾವಣೆಗೆ ರೂಪಿಸಿದ ತಂತ್ರಗಾರಿಕೆ ಅನುಷ್ಠಾನ, ಪ್ರಚಾರದ ಪ್ರಗತಿ ಅವಲೋಕಿಸಲಿದೆ. ಅಲ್ಲದೆ, ಪ್ರಧಾನಿಯಾಗಿ ನರೇಂದ್ರ ಮೋದಿ ಎಂಟು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಜೂ.15ರವರೆಗೆ ಹಮ್ಮಿಕೊಳ್ಳಬೇಕಾದ ಸೇವಾ ಚಟುವಟಿಕೆಗಳು ಚರ್ಚೆಯಾಗಲಿವೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ. ಶಾಸಕಾಂಗ ಪಕ್ಷದ ಸಭೆ: ಪಕ್ಷದ ಶಾಸಕಾಂಗ ಪಕ್ಷದ ಸಭೆ ಜೂ.9ರಂದು ನಿಗದಿಯಾಗಿದೆ. ಮತ ಚಲಾವಣೆ ಕಡ್ಡಾಯವೆಂದು ಪ್ರತಿಯೊಬ್ಬ ಶಾಸಕರಿಗೆ ಸೂಚಿಸಿ, ವ್ಹಿಪ್ ಜಾರಿಯಾಗಲಿದೆ. ಪಕ್ಷದ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿರುವ ಕಾರಣ ಅನಗತ್ಯ ಗೊಂದಲ, ಮತಗಳು ಅಸಿಂಧು ಆಗುವುದನ್ನು ತಪ್ಪಿಸಲು ಸಭೆ ಸಲಹೆ-ಸೂಚನೆಗಳನ್ನು ನೀಡಲಿದೆ. ಕೇಂದ್ರ ಹಣಕಾಸು ಸಚಿವೆ, ರಾಜ್ಯಸಭೆ ಚುನಾವಣೆ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಜೂ.9ರಂದು ರಾಜ್ಯಕ್ಕೆ ಆಗಮಿಸಲಿದ್ದು, ಜೂ.10ರಂದು ಫಲಿತಾಂಶ ಪ್ರಕಟವಾದ ನಂತರವೇ ದೆಹಲಿಗೆ ಮರಳಲಿದ್ದಾರೆ.
ಬಿಎಸ್ವೈ ಮುನಿಸು ತಮಣಿಗೆ ಭೇಟಿ: ಪಕ್ಷದ ವರಿಷ್ಠರ ಆಣತಿಯಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮುನಿಸು ತಣಿಸುವ ಉದ್ದೇಶದಿಂದ ಅರುಣ್ ಸಿಂಗ್ ಭೇಟಿ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
6 ರಿಂದ 8ರವರೆಗೆ ಚುನಾವಣಾ ಪ್ರಚಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ, ಅರುಣ್ ಸಿಂಗ್, ಸಚಿವರು, ಪಕ್ಷದ ರಾಜ್ಯಾಧ್ಯಕ್ಷರು ಸೇರಿ ರಾಜ್ಯ ನಾಯಕರು ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ. ಜೂ.6 ರಿಂದ 8ರವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.