ನೂತನ ಜವಳಿ ನೀತಿ ಜಾರಿಗೆ ಸಿದ್ಧತೆ: ಸಚಿವ ಶಿವಾನಂದ ಪಾಟೀಲ | National Hand loom expo

Handlooms expo
Published on

ಬೆಂಗಳೂರು: ಹೊಸ ಜವಳಿ ನೀತಿ ಜಾರಿಗೆ ಸಿದ್ಧತೆಗಳಾಗುತ್ತಿವೆ. ಜವಳಿ ಉದ್ಯಮಕ್ಕೆ ಪುನಶ್ಚೇತನಕ್ಕೆ ಪೂರಕವಾಗಿ ನೀತಿ ರೂಪಿಸಲು ತಜ್ಞರೊಂದಿಗೆ ಚರ್ಚೆಯಾಗುತ್ತಿದೆ ಎಂದು ಜವಳಿ, ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಮಾಹಿತಿ ನೀಡಿದರು.

ಜಾಲಹಳ್ಳಿ ಮುಖ್ಯರಸ್ತೆಯ ಎಚ್‌ಎಂಟಿ ಮೈದಾನದಲ್ಲಿ ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಸಹಭಾಗಿತ್ವದಲ್ಲಿ ಕಾವೇರಿ ಹ್ಯಾಂಡ್‌ಲೂಮ್ಸ್ ಆಯೋಜಿಸಿರುವ 15 ದಿನಗಳ ರಾಷ್ಟ್ರೀಯ ಕೈಮಗ್ಗ ಮೇಳಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಹೊಸ ನೀತಿಯಲ್ಲಿ ನೆರೆ ರಾಜ್ಯಗಳ ಉತ್ತಮ, ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳುವ ಚಿಂತನೆಯಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕೈಮಗ್ಗ ನೇಕಾರರ ಹಿತದೃಷ್ಟಿಯಿಂದ ಹಲವಾರು ಯೋಜನೆ ಜಾರಿಗೊಳಿಸಲಾಗಿದೆ. ವಿದ್ಯುತ್ ಮಗ್ಗ ನೇಕಾರಿಕೆ ಪ್ರೋತ್ಸಾಹಿಸಲು ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪ್ರಕಾರ ಒಂದರಿಂದ 10 ಅಶಶಕ್ತಿವರೆಗೆ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದರು.

ರಿಯಾಯಿತಿ ದರದ ವಿದ್ಯುತ್

ವಿದ್ಯುತ್ ಮಗ್ಗಗಳಿಗೆ 10.1 ಅಶ್ವಶಕ್ತಿಯಿಂದ 20 ಅಶ್ವಶಕ್ತಿವರೆಗೆ ಪ್ರತಿ ಯೂನಿಟ್‌ಗೆ 1.25 ರೂ., ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತಿದೆ. 2024-25ನೇ ಸಾಲಿನಲ್ಲಿ 30,042 ಘಟಕಗಳು ರಿಯಾಯಿತಿ ದರದ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ.

ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯುತ್ ಮಗ್ಗಗಳಿಗೆ 200 ಎಚ್‌ಪಿವರೆಗಿನ ವಿದ್ಯುತ್ ಸಂಪರ್ಕ ಪಡೆದ ಘಟಕಗಳಿಗೆ ವಿದ್ಯುತ್ ಬಿಲ್ ಪಾವತಿ ಮಾಡಿದ ಒಟ್ಟು ಮೊತ್ತದಲ್ಲಿ ಶೇ.50ರಷ್ಟು ಸಹಾಯಧನ ನೀಡಲಾಗುತ್ತಿದೆ ಎಂದು ಶಿವಾನಂದಪಾಟೀಲ ವಿವರಿಸಿದರು.

ನೇಕಾರರ ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕ್‌ಗಳಿಂದ ನೇಕಾರರಿಗೆ ಶೂನ್ಯ ಮತ್ತು ಶೇ.1ರ ಬಡ್ಡಿ ದರದಲ್ಲಿ ಎರಡು ಲಕ್ಷ ರೂ.ವರೆಗೆ, ಶೇ.3ರ ಬಡ್ಡಿ ದರದಲ್ಲಿ ಮೂರು ಲಕ್ಷ ರೂ.ವರೆಗೆ ನೀಡುವ ಸಾಲಕ್ಕೆ ಬಡ್ಡಿ ಸಹಾಯಧನ ನೀಡಲಾಗುತ್ತಿದೆ.

ಹೊಸದಾಗಿ ಸಣ್ಣ ಮತ್ತು ಅತಿಸಣ್ಣ ಜವಳಿ ಘಟಕಗಳ ಸ್ಥಾಪನೆಗೆ ಎಸ್‌ಸಿ, ಎಸ್‌ಟಿ ಉದ್ಯಮಶೀಲರಿಗೆ ಪ್ರೋತ್ಸಾಹಿಸಲು ಪ್ರಸಕ್ತ ಸಾಲಿಗೆ 50 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಮೂರನೇ ತ್ರೈಮಾಸಿಕ ಅವಧಿಗೆ ಬಿಡುಗಡೆ ಮಾಡಿದ 37.50 ಕೋಟಿ ರೂ.ಗಳನ್ನು ಘಟಕಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಗತವೈಭವ ಮರಳಿಸಲು ಕ್ರಮ

ಕಾವೇರಿ ಹ್ಯಾಂಡ್‌ಲೂಮ್ಸ್‌ನ ಗತವೈಭವವನ್ನು ಮರಳಿ ತರಬೇಕಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಶಿವಾನಂದ ಪಾಟೀಲ ಭರವಸೆಯಿತ್ತರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾವೇರಿ ಹ್ಯಾಂಡ್‌ಲೂಮ್ಸ್ ಮಾರಾಟ ಮಳಿಗೆ ಆರಂಭಿಸಲು ಸಹಕಾರ ನೀಡಲಾಗುವುದು. 16 ಕೋಟಿ ರೂ. ಸಾಲ ತೀರಿಸಲು ಸಾಧ್ಯವಾಗದ ಕಾರಣ ಅಪೆಕ್ಸ್ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದ್ದ ಕಟ್ಟಡವನ್ನು ಇತ್ಯರ್ಥಪಡಿಸಿ ಉಳಿಸಿಕೊಳ್ಳಲಾಗಿದೆ. ಈ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, 50 ಕೋಟಿ ರೂ. ಆಸ್ತಿಯಾಗಲಿದೆ.

ರಾಷ್ಟ್ರೀಯ ಕೈಮಗ್ಗ ಮೇಳಕ್ಕೆ ಕೇಂದ್ರ ಸರ್ಕಾರ 80 ಮಳಿಗೆಗಳಿಗೆ ಅವಕಾಶ ಕಲ್ಪಿಸಿದೆ. ಅನೇಕ ನೇಕಾರರು ಮಳಿಗೆ ಸಿಗದ ಮೇಳದಿಂದ ಹೊರಗೆ ಉಳಿದಿರುವುದು ಗಮನಕ್ಕೆ ಬಂದಿದೆ. ಹೆಚ್ಚುವರಿ 20 ಮಳಿಗೆಗಳಿಗೆ ರಾಜ್ಯ ಸರ್ಕಾರ ನೆರವು ನೀಡಲಿದೆ ಎಂದು ಶಿವಾನಂದ ಪಾಟೀಲ ಹೇಳಿದರು.

ಕಾವೇರಿ ಹ್ಯಾಂಡ್‌ಲೂಮ್ಸ್ ಅಧ್ಯಕ್ಷ ಬಿ.ಜೆ.ಗಣೇಶ ಮಾತನಾಡಿ ಬೆಳಗಾವಿ ಸೇರಿ ಹಲವೆಡೆ ಮಾರಾಟ ಮಳಿಗೆ ಆರಂಭಿಸಲು ಸಹಕರಿಸಬೇಕು. ಬೆಂಗಳೂರಿನಲ್ಲಿ ಕನಿಷ್ಠ ಮೂರು ಮಳಿಗೆಗಳನ್ನು ಅರಂಭಿಸುವ ಅಗತ್ಯವಿದೆ ಎಂದು ಸಚಿವರಿಗೆ ಮನವಿ ಮಾಡಿದರು. ಉಪಾಧ್ಯಕ್ಷ ನಾರಾಯಣ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಆಯುಕ್ತೆ ಕೆ.ಜ್ಯೋತಿ ಶ್ರೀನಿವಾಸಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net