

Preity Zinta : ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿದ್ದ ಪ್ರೀತಿ ಝಿಂಟಾ, ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದು, ಅನೇಕ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಪಂಜಾಬ್ ಐಪಿಎಲ್ ತಂಡದ ಒಡತಿಯಾಗಿರುವ ಪ್ರೀತಿ ಝಿಂಟಾ, ಕಳೆದ ಎರಡು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ.
ಪ್ರೀತಿ ಝಿಂಟಾ ಅವರಿಗೆ ಸಂಬಂಧಿಸಿದ 18 ಕೋಟಿ ರೂಪಾಯಿ ಸಾಲವನ್ನು ಬ್ಯಾಂಕ್ ಮನ್ನಾ ಮಾಡಿದೆ ಎಂಬ ವರದಿಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿದೆ. ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಪ್ರೀತಿ ಝಿಂಟಾ ಅವರ ಹೆಸರಿನಲ್ಲಿರುವ 18 ಕೋಟಿ ರೂ. ಸಾಲ ಸೇರಿದಂತೆ ಕೆಲವು ಸಾಲಗಳನ್ನು ಮನ್ನಾ ಮಾಡಿದೆ ಎಂಬ ವರದಿಗಳಿವೆ.
ಈ ಸುದ್ದಿ ಹೊರಬರುತ್ತಿದ್ದಂತೆ ಪ್ರೀತಿ ಝಿಂಟಾ ಅವರ ಕಾನೂನು ತಂಡ ಈಗಾಗಲೇ ಸ್ಪಷ್ಟನೆ ಸಹ ನೀಡಿದೆ. ತನ್ನ ಹೇಳಿಕೆಯಲ್ಲಿ 12 ವರ್ಷಗಳ ಹಿಂದೆ, ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಹೊಂದಲಾಗಿತ್ತು. ಆದರೆ, 10 ವರ್ಷಗಳ ಹಿಂದೆಯೇ ಈ ಓವರ್‌ಡ್ರಾಫ್ಟ್ ಸೌಲಭ್ಯಕ್ಕೆ ಸಂಬಂಧಿಸಿದ ಸಂಪೂರ್ಣ ಬಾಕಿಗಳನ್ನು ಪಾವತಿಸಿ ಖಾತೆಯನ್ನು ಮುಚ್ಚಲಾಗಿದೆ ಎಂದು ತಿಳಿಸಿದೆ.
ಆದರೂ, ಕೇರಳ ಕಾಂಗ್ರೆಸ್ ಇತ್ತೀಚೆಗೆ ಮಾಡಿರುವ ಟ್ವೀಟ್ ಭಾರಿ ವಿವಾದ ಹುಟ್ಟುಹಾಕಿದೆ. ಪ್ರೀತಿ ಝಿಂಟಾ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಿಜೆಪಿಗೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ 18 ಕೋಟಿ ರೂಪಾಯಿ ಸಾಲಗಳನ್ನು ಮನ್ನಾ ಮಾಡಲಾಗಿದೆ. ಇದರಿಂದಾಗಿ ಆ ಬ್ಯಾಂಕ್ ದಿವಾಳಿಯಾಗಿದ್ದು, ಠೇವಣಿದಾರರು ತಮ್ಮ ಹಣಕ್ಕಾಗಿ ಬೀದಿಗಳಲ್ಲಿ ಮಲಗಿದ್ದಾರೆ ಎಂದು ಕೇರಳ ಕಾಂಗ್ರೆಸ್ ಆರೋಪ ಮಾಡಿದೆ. ಇದರ ಬೆನ್ನಲ್ಲೇ ಪ್ರೀತಿ ಝಿಂಟಾ ಅವರು ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.
ನನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ನಾನೇ ನಿರ್ವಹಿಸುತ್ತೇನೆ. ಇಂತಹ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವುದಕ್ಕೆ ನಿಮಗೆ ನಾಚಿಕೆ ಆಗಬೇಕು. ಯಾರು ಕೂಡ ನನ್ನ ಸಾಲವನ್ನು ಮನ್ನಾ ಮಾಡಿಲ್ಲ. ಒಂದು ರಾಜಕೀಯ ಪಕ್ಷವು ನನ್ನ ಹೆಸರು ಮತ್ತು ಫೋಟೋವನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ತೆಗೆದುಕೊಂಡ ಸಾಲವನ್ನು 10 ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ಮರುಪಾವತಿಸಲಾಗಿದೆ. ಈ ಒಂದು ಸ್ಪಷ್ಟನೆ ಭವಿಷ್ಯದಲ್ಲಿ ಯಾವುದೇ ತಪ್ಪುಗ್ರಹಿಕೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರೀತಿ ಝಿಂಟಾ ಅವರು ಟ್ವೀಟ್ ಮಾಡಿದ್ದಾರೆ.
ಪ್ರೀತಿ ಝಿಂಟಾ ಅವರ ಸ್ಪಷ್ಟನೆ ಬೆನ್ನಲ್ಲೇ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಕೇರಳ ಕಾಂಗ್ರೆಸ್ ಅನ್ನು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್)