

ಲಖನೌ: ಗರ್ಭಿಣಿ ಮಹಿಳೆಯೊಬ್ಬಳಿಗೆ ದೆವ್ವ ಹಿಡಿದಿದೆ ಎಂದು ತಾಂತ್ರಿಕನಿಂದ ಭೂತೋಚ್ಚಾಟನೆ ನಡೆಸಿದ್ದರ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿದೆ.
ಪೂಜಾ(20) ಎಂಬುವಳೇ ಮೃತ ದುರ್ದೈವಿಯಾಗಿದ್ದು, ಈಕೆ ನಗರದ ಮೊಹಲ್ಲಾ ಶೇಖು ನಗರ ಪ್ರದೇಶದ ನಿವಾಸಿ ಜೀತೇಂದ್ರನ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದಳು. ಜೀವನೋಪಾಯಕ್ಕಾಗಿ ದಂಪತಿಗಳು ಮುಂಬೈನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಗರ್ಭಿಣಿಯಾದ ಬಳಿಕ ಪತ್ನಿಯ ಆರೋಗ್ಯ ಹದಗೆಡ ತೋಡಗಿತ್ತು. ಹೀಗಾಗಿ ಆತ ಆಕೆಯನ್ನು ತನ್ನೂರಿಗೆ ಕರೆತಂದಿದ್ದನು. ಈ ವೇಳೆ ಆಕೆಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಟ್ಟಿದ್ದು, ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಬದಲು ಕುಟುಂಬ ಸದಸ್ಯರು ವಾಮಾಚಾರ ತಂತ್ರದ ಮೊರೆಹೋಗಿದ್ದಾರೆ.
ಈ ಕುರಿತು ಮಾತನಾಡಿದ ಆಕೆಯ ಅತ್ತೆ, ತನ್ನ ಗರ್ಭಿಣಿ ಸೊಸೆಯು ಪ್ರೇತದ ನೆರಳಿನಿಂದಾಗಿ ಕಿರುಚುತ್ತಾ ಬೇರೆ ಬೇರೆ ಶಬ್ದಗಳನ್ನು ಮಾಡುತ್ತಿದ್ದಳು. ಇದರಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಬದಲು ಶ್ರೀನಗರ ಕೊತ್ವಾಲಿ ಪ್ರದೇಶದ ಸೆಲಾಪುರ್ವಾ ಗ್ರಾಮದ ತಾಂತ್ರಿಕನ ಬಳಿ ಭೂತೋಚ್ಚಾಟನೆ ನಡೆಸಲಾಯಿತು. ಆ ತಾಂತ್ರಿಕನು ತನ್ನ ಸೊಸೆಯ ಹೊಟ್ಟೆಯನ್ನು ಹಿಸುಕಿದ್ದು, ನಂತರ ಹೊಟ್ಟೆ ನೋವು ಕಾಣಿಸಿಕೊಂಡು ಆಕೆಯ ಸ್ಥಿತಿ ಹದಗೆಟ್ಟಿತು ಎಂದು ಆರೋಪಿಸಿದ್ದಾಳೆ.
ಬಳಿಕ ಆಕೆಯನ್ನು ಕುಟುಂಬಸ್ಥರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ತಪಾಸಣೆ ನಡೆಸಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದಾರೆ. ಭೂತೋಚ್ಚಾಟನೆಯಿಂದ ನವವಿವಾಹಿತ ಮಹಿಳೆ ಸಾವನ್ನಪ್ಪಿರುವುದು ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಲಿದೆ.(ಏಜೆನ್ಸೀಸ್)