ಕೆಎಸ್​ಆರ್​ಟಿಸಿ ಗರ್ಭಿಣಿ ನೌಕರರಿಗೆ ಒಂದು ವರ್ಷ ರಜೆ

page 7 2
Published on

ಬೆಂಗಳೂರು: ಕೆಎಸ್ಸಾರ್ಟಿಸಿಯಲ್ಲಿ ಕೆಲಸ ಮಾಡುತ್ತಿರುವ ಗರ್ಭಿಣಿ ನೌಕರರ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಎಲ್ಲ ಘಟಕ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳಿಗೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಆದೇಶಿಸಿದ್ದಾರೆ. ಕರೊನಾ ಸೋಂಕಿನ ಭೀತಿಯ ನಡುವೆ ಕೆಲಸ ಮಾಡುತ್ತಿರುವ ಗರ್ಭಿಣಿ ನೌಕರರಿಗೆ ಕೆಲವೊಂದು ವಿನಾಯಿತಿ ನೀಡಲು ಕೆಎಸ್ಸಾರ್ಟಿಸಿ ಮುಂದಾಗಿದೆ.

ಅದರಂತೆ ಗರ್ಭಿಣಿ ನೌಕರರಿಗೆ ಗರ್ಭಧಾರಣೆ ಮಾಡಿದ 3 ತಿಂಗಳ ನಂತರ ಲಘು ಕರ್ತವ್ಯಕ್ಕೆ ನಿಯೋಜಿಸುವಂತೆ ಸೂಚಿಸಲಾಗಿದೆ. ಅದರ ಜತೆಗೆ 7 ತಿಂಗಳು ತುಂಬಿದವರಿಗೆ ಮುಂದಿನ 6 ತಿಂಗಳು ಕಡ್ಡಾಯವಾಗಿ ಹೆರಿಗೆ ರಜೆಯನ್ನು ನೀಡಬೇಕು. ಹೆರಿಗೆ ರಜೆ ಮುಕ್ತಾಯವಾದ ನಂತರವೂ ನೌಕರರ ಖಾತೆಯಲ್ಲಿ ರಜೆಯಿದ್ದರೆ ಮುಂದಿನ 3 ತಿಂಗಳವರೆಗೆ ರಜೆಯನ್ನು ವಿಸ್ತರಿಸಬೇಕು. ಒಂದು ವೇಳೆ ಖಾತೆಯಲ್ಲಿ ರಜೆಯಿಲ್ಲದಿದ್ದರೆ, ಲೆಕ್ಕಕ್ಕಿಲ್ಲದ ರಜೆ ರೂಪದಲ್ಲಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನೌಕರರು ಹೆರಿಗೆ ನಂತರ ಮಗುವಿಗೆ 1 ವರ್ಷ ತುಂಬುವವರೆಗೆ ರಜೆ ತೆಗೆದುಕೊಳ್ಳಲು ಬಯಸಿದರೆ, ಅದನ್ನು ಕೂಡಲೆ ಪರಿಗಣಿಸಬೇಕು. ಅವರ ಖಾತೆಯಲ್ಲಿ ರಜೆಯಿಲ್ಲದಿದ್ದರೆ ವೇತನ ರಹಿತ ರಜೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net