ಗೂಡ್ಸ್ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಪ್ರಾಣ ಬಿಟ್ಟ ಗರ್ಭಿಣಿ ಆನೆ

train
Published on

ಪಶ್ಚಿಮ ಬಂಗಾಳ: ಅಲಿಪುರ್ದೂರ್ ಜಿಲ್ಲೆಯ ಚಪ್ರಮರಿ ಮೀಸಲು ಅರಣ್ಯದಲ್ಲಿ ಗರ್ಭಿಣಿ ಆನೆಯೊಂದಕ್ಕೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ.

ಮಾಹಿತಿ ಪ್ರಕಾರ, ಬೆಳಗಿನ ಜಾವ 3 ಗಂಟೆಗೆ ಗೂಡ್ಸ್ ರೈಲು ಚಪ್ರಮರಿ ಮೀಸಲು ಅರಣ್ಯದ ಮೂಲಕ ಹಾದು ಹೋಗುತ್ತಿದ್ದಾಗ ಗೂಡ್ಸ್ ರೈಲು ಆನೆಗೆ ಡಿಕ್ಕಿ ಹೊಡೆದಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ, ಆನೆಯ ಹೊಟ್ಟೆಯಲ್ಲಿದ್ದ ಮರಿ ಕೂಡಾ ತಾಯಿ ಆನೆ ಜತೆಗೆ ಕೊನೆಯುಸಿರೆಳದಿದೆ. ಸಾವನ್ನಪ್ಪಿರುವ ಆನೆಯನ್ನು ಗೂಡ್ಸ್ ರೈಲು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದೆ.

ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು. ಮರಣೋತ್ತರ ಪರೀಕ್ಷೆಯ ನಂತರ ತಾಯಿ ಮತ್ತು ಆನೆಯ ಭ್ರೂಣವನ್ನು ಅಂತ್ಯಕ್ರಿಯೆ ನಡೆಸಲಾಗಿದೆ. ದೇಶದ ಆನೆಗಳ ಜನಸಂಖ್ಯೆಯ ಸುಮಾರು 2% ನಷ್ಟು ನೆಲೆಯಾಗಿರುವ ಪಶ್ಚಿಮ ಬಂಗಾಳದಲ್ಲಿ ಇಂತಹ ಘಟನೆಗಳು ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾತ್ರಿ ವೇಳೆ ಡಾಲಮೈಟ್​​ನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ರೈಲು ಗರ್ಭಿಣಿ ಆನೆಗೆ ಡಿಕ್ಕಿ ಹೊಡೆದಿದೆ. ಆದರೆ ಭಾರತೀಯ ರೈಲ್ವೇ ಇಲಾಖೆಯ ನಿಯಮದ ಪ್ರಕಾರ, ರಾತ್ರಿ ಹೊತ್ತು ಗೂಡ್ಸ್ ರೈಲುಗಳು ಓಡಾಡುವಂತಿಲ್ಲ. ಸರಕು ರೈಲುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ, ಜತೆಗೆ ವೇಗದ ನಿರ್ಬಂಧಗಳೂ ಇವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಜಾಖರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net