

ಎಚ್.ಡಿ.ಕೋಟೆ: ಗರ್ಭಿಣಿಯರು ಕಡ್ಡಾಯವಾಗಿ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ.ಪೂರ್ಣಿಮಾ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಸ್ವಾಸ್ಥ ಮಾತೃ ವಂದನಾ ಆಂದೋಲನ ಕಾರ್ಯಕ್ರಮದಡಿ ತಾಯಿಯಿಂದ ಮಗುವಿಗೆ ಎಚ್‌ವಿ, ಸಿಪಿಲಿಸ್ ಮತ್ತು ಹೆಪಟೈಟಿಸ್ ನಿರ್ಮೂಲನೆಗಾಗಿ ಜಾಗೃತಿ ಮೂಡಿಸುವ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ಕಡ್ಡಾಯ. ಏಕೆಂದರೆ ತಾಯಿಗೆ ಏನಾದರೂ ಸೋಂಕು ಇದ್ದರೆ ಮಗುವಿಗೆ ಹರಡದಂತೆ ತಪ್ಪಿಸಬಹುದು. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಜನರಿಗೆ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದರು.
ತಾಲೂಕು ಪಂಚಾಯಿತಿ ಇಒ ಧರಣೀಶ್ ಮಾತನಾಡಿ, ಗರ್ಭಿಣಿಯರ ಕಾಳಜಿಯಲ್ಲಿ ಆರೋಗ್ಯ ಇಲಾಖೆ ಕೈಗೊಂಡಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಗರ್ಭಿಣಿಯರು ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು. ಸೊಪ್ಪು, ತರಕಾರಿಗಳನ್ನು ಸೇವಿಸಬೇಕು. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷ ಅಂತರವಿರಬೇಕು ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೋಮಣ್ಣ, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.