

| ಕೇಶವಮೂರ್ತಿ ವಿ.ಬಿ. ಹಾವೇರಿ
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2019ರಲ್ಲಿ ಅಸ್ತಿತ್ವಕ್ಕೆ ಬರಲು ‘ವಲಸೆ’ ಕೊಡುಗೆ ನೀಡಿದ್ದ ಹಿರೇಕೆರೂರು ವಿಧಾನಸಭಾ ಕ್ಷೇತ್ರ ಈ ಬಾರಿಯೂ ರಾಜ್ಯದ ಗಮನ ಸೆಳೆಯಲಿದೆ. ಉಪ ಚುನಾವಣೆಯಲ್ಲಿ ಬಿಎಸ್ವೈ ಅವರಿಂದ ಜೋಡೆತ್ತು ಎಂದು ಕರೆಸಿಕೊಂಡಿದ್ದ ಬಿ.ಸಿ. ಪಾಟೀಲ ಮತ್ತು ಯು.ಬಿ. ಬಣಕಾರ ಮತ್ತೆ ಪ್ರತಿಸ್ಪರ್ಧಿಗಳಾಗುವುದು ನಿಚ್ಚಳವಾಗಿದೆ.
ಜೆಡಿಎಸ್ನಿಂದ ಒಂದು ಬಾರಿ, ಕಾಂಗ್ರೆಸ್ನಿಂದ ಎರಡು ಬಾರಿ ಶಾಸಕರಾಗಿ ಕ್ಷೇತ್ರ ಪ್ರತಿನಿಧಿಸಿರುವ ಬಿ.ಸಿ. ಪಾಟೀಲ, 17 ಶಾಸಕರ ಗುಂಪಿನಲ್ಲಿ ಪಕ್ಷಾಂತರ ಮಾಡಿ ಬಿಜೆಪಿ ಸೇರಿದ್ದರು. ಕಮಲ ಪಡೆಯಿಂದ ಸ್ಪರ್ಧಿಸಿ 2019ರ ಉಪ ಚುನಾವಣೆಯಲ್ಲಿ ಜಯಭೇರಿ ಭಾರಿಸಿ, ಕೃಷಿ ಸಚಿವರೂ ಆಗಿದ್ದಾರೆ.
ಬಿಎಸ್ವೈ ಆಪ್ತರಾಗಿದ್ದ ಮಾಜಿ ಶಾಸಕ ಯು.ಬಿ. ಬಣಕಾರ ಇತ್ತೀಚೆಗೆ ಬಿಜೆಪಿಗೆ ಗುಡ್ಬೈ ಹೇಳಿ, ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಾತರಿಯಾಗಿಯೇ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ವೀರಶೈವ- ಲಿಂಗಾಯತ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದಿಂದ ಹೊರಬಂದಿದ್ದಾರೆ. ಕಾಂಗ್ರೆಸ್ನಿಂದ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ದಿಗ್ವಿಜಯ ಹತ್ತಿ, ಪಿ.ಡಿ. ಬಸನಗೌಡ ಸೇರಿ ಹಲವರು ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್ನಿಂದ ಮೊದಲ ಬಾರಿಗೆ ಶಾಸಕರಾಗಿದ್ದ ಬಿ.ಸಿ.ಪಾಟೀಲ ಕಾಂಗ್ರೆಸ್ ಸೇರಿದ ಬಳಿಕ ಜಾ.ದಳಕ್ಕೆ ಕ್ಷೇತ್ರದಲ್ಲಿ ಗಟ್ಟಿ ನೆಲೆ ಇಲ್ಲ. ಆದರೂ ಕ್ಷೇತ್ರದ ಅಭ್ಯರ್ಥಿ ಎಂದು ಘೊಷಿಸಲ್ಪಟ್ಟಿರುವ ದಯಾನಂದ ಜಾವಣ್ಣವರ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ನಲ್ಲಿಯೂ ಟಿಕೆಟ್ಗಾಗಿ ತೀವ್ರ ಪೈಪೋಟಿ ಇರುವುದರಿಂದ ಬಣಕಾರ ಅವರಿಗೇ ಟಿಕೆಟ್ ಪಕ್ಕಾ ಎಂದು ಈಗಲೇ ಹೇಳಲಾಗದು. ಒಂದು ವೇಳೆ ಬಣಕಾರ ಅವರಿಗೇ ಕೈ ಟಿಕೆಟ್ ಸಿಕ್ಕರೆ ಒಂದು ಕಾಲದ ಜೋಡೆತ್ತುಗಳ ಮಧ್ಯೆ ಬಿಗ್ ಫೈಟ್ ನಡೆಯುವುದು ನಿಶ್ಚಿತ.
ರಟ್ಟಿಹಳ್ಳಿ ಪ್ರಮುಖ ಪಾತ್ರ: ಹಿರೇಕೆರೂರು ತಾಲೂಕಿನಿಂದ ಬೇರ್ಪಟ್ಟು ನೂತನ ತಾಲೂಕಾಗಿರುವ ರಟ್ಟಿಹಳ್ಳಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಾಗಾಗಿ, ಸ್ಥಳೀಯ ಮುಖಂಡರ ಮನವೊಲಿಸುವ ಕೆಲಸವನ್ನು ಎಲ್ಲ ಪಕ್ಷದವರೂ ಆರಂಭಿಸಿದ್ದಾರೆ. ರಟ್ಟಿಹಳ್ಳಿ ಕಡೆಗೆ ಹೆಚ್ಚು ಎಡತಾಕುತ್ತಿದ್ದಾರೆ.
ಬನ್ನಿಕೋಡರ ನಡೆ ಯಾವ ಕಡೆ?: ಉಪ ಚುನಾವಣೆಯಲ್ಲಿ ಬಿ.ಸಿ.ಪಾಟೀಲರ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಬಿ.ಎಚ್.ಬನ್ನಿಕೋಡ 56 ಸಾವಿರ ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಹಿರಿಯ ಕಾಂಗ್ರೆಸ್ ಮುಖಂಡ ಬನ್ನಿಕೋಡ ತಮ್ಮದೇ ಆದ ಬೆಂಬಲಿಗರನ್ನು ಹೊಂದಿದ್ದಾರೆ. ಯು.ಬಿ.ಬಣಕಾರ ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ಲಾಭದಾಯಕವಾಗಿದ್ದರೂ, ಈ ಬಾರಿ ಕೈ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಪಕ್ಕಾ ಆಗಬೇಕಿದೆ. ಕಳೆದ ಬಾರಿ ಪಕ್ಷದ ಮುಖಂಡರೇ ಬನ್ನಿಕೋಡರಿಗೆ ಟಿಕೆಟ್ ನೀಡಿ ಚುನಾವಣೆಗೆ ಧುಮುಕಿಸಿದ್ದರು. 70 ವರ್ಷ ದಾಟಿರುವ ಬನ್ನಿಕೋಡ ಇದೊಂದು ಬಾರಿ ಬಿ-ಫಾರಂ ಕೊಡಿ ಎಂದು ಪಕ್ಷಕ್ಕೆ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಬಣಕಾರರಿಗೆ ಕೈ ಟಿಕೆಟ್ ನೀಡಿದರೆ ಬನ್ನಿಕೋಡರ ನಡೆ ಬದಲಾಗುವ ಸಾಧ್ಯತೆಯೂ ಇದೆ.
ಅದಲು ಬದಲು ಸಂಭವ: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ವಿವಿಧ ಪಕ್ಷಗಳ ಪ್ರಮುಖ ಮುಖಂಡರು ಅದಲು ಬದಲು ಆಗುವ ಸಂಭವ ಇದೆ. ಕ್ಷೇತ್ರದಲ್ಲಿ ಸಾವಿ ರಾರು ಮತಗಳನ್ನು ತಂದುಕೊಡುವ ಸಾಮರ್ಥ್ಯ ಇರುವ ಅನೇಕ ಮುಖಂಡರನ್ನು ತಮ್ಮತ್ತ ಸೆಳೆಯುವ ತಂತ್ರವನ್ನು ಪ್ರಬಲ ಅಭ್ಯರ್ಥಿಗಳು ತೆರೆಮರೆ ಹಿಂದೆ ಮಾಡುತ್ತಿದ್ದಾರೆ.