

ಪ್ರಾರ್ಥನೆ ಎನ್ನುವುದು ದೇವರು ಮತ್ತು ಭಕ್ತನ ನಡುವಿನ ಅನುಸಂಧಾನ. ಆದ್ದರಿಂದ ಅಲ್ಲಿ ಯಾವತ್ತೂ ಮೂರನೆಯವರಿಗೆ ಪ್ರವೇಶವಿಲ್ಲ. ಆ ಕಾರಣದಿಂದ ಯೇಸು ಈ ರೀತಿ ಹೇಳುತ್ತಾನೆ: ‘ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದೋ ವಿಶೇಷವಾಗಿ ಗಮನಿಸಲೆಂದೋ ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಕೆಲವರು ಇಚ್ಚಿಸುತ್ತಾರೆ.
ಆಗ ಅವರಿಗೆ ಸಲ್ಲಬೇಕಾದ ಪೂರ್ತಿಫಲ ಆಗಲೇ ಬಂದಾಯಿತು ಅಥವಾ ನಿಂತು ಹೋಯಿತು ಎಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ಆದರೆ, ನೀನು ಪ್ರಾರ್ಥನೆ ಮಾಡುವಾಗ ಏನು ಮಾಡಬೇಕೆಂದರೆ ನಿನ್ನ ಕೊಠಡಿಗೆ ಹೋಗು. ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ನಿನ್ನ ಕೋರಿಕೆಗಳನ್ನು ಸಲ್ಲಿಸು. ನಿನ್ನ ಅಂತರಂಗವನ್ನು ಕಾಣಬಲ್ಲ ನಿನ್ನ ತಂದೆಯಾದ ದೇವರು ನಿನಗೆ ಖಂಡಿತ ಪ್ರತಿಫಲವನ್ನು ನೀಡುವರು’.
ಉಪವಾಸ ಕೈಗೊಳ್ಳುವಾಗ ಹೇಗಿರಬೇಕು ಎಂಬುದನ್ನೂ ಯೇಸು ವಿವರಿಸಿದ್ದಾರೆ. ಅದೇನೆಂದರೆ... ‘ನೀವು ಉಪವಾಸ ಕೈಗೊಳ್ಳುವಾಗ, ಕಪಟಿಗಳಂತೆ ಮುಖ ಸಪ್ಪೆ ಮಾಡುವುದು ಬೇಡ. ಕೆಲವರು ಜನರ ಕಣ್ಣುಗಳಿಗೆ ತಾವು ಉಪವಾಸ ಮಾಡುತ್ತಿದ್ದೇವೆಂದು ತೋರ್ಪಡಿಸಲು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಇಂತಹ ಕೃತ್ಯದಿಂದ ಅವರಿಗೆ ಈ ಲೋಕದಲ್ಲೇ ಪ್ರತಿಫಲ ಬಂದಾಯಿತೆಂದು ನೀವು ತಿಳಿಯಿರಿ. ಆದರೆ, ನೀನು ಉಪವಾಸ ಮಾಡುವಾಗ ಮುಖ ತೊಳೆದುಕೊ, ತಲೆ ಬಾಚಿಕೋ. ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣುವುದಿಲ್ಲ.
ನಿನ್ನ ಅಂತರಂಗದಲ್ಲಿರುವ ನಿನ್ನ ತಂದೆಗೆ ಮಾತ್ರ ಅದು ಕಾಣುತ್ತಿರುತ್ತದೆ. ಅದನ್ನು ವೀಕ್ಷಿಸುವ ನಿನ್ನ ತಂದೆ ದೇವರು ಅದಕ್ಕೆ ಸೂಕ್ತ ಪ್ರತಿಫಲವನ್ನು ಖಂಡಿತ ದಯಪಾಲಿಸುವರು’. ಹೀಗೆಂದು ಯೇಸು ನೆರೆದ ಜನರಿಗೆ ಪ್ರಾರ್ಥನೆ/ಉಪವಾಸಗಳ ಮಹತ್ವವನ್ನು ವಿವರಿಸಿದನು.