ಪ್ರವೀಣ್ ಪ್ರಹರ; ಹಾಡುವ ಗಡಿಯಾರ

Prahara
Published on

ನಾಡಿನ ಸುಪ್ರಸಿದ್ಧ ಸಂಗೀತಗಾರ, ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅಂದರೆ ನೆನಪಾಗುವುದು ಬಾನ್ಸುರಿ. ಕೊಳಲು. ಆದರೆ ಅವರು ಅಷ್ಟೇ ಅಲ್ಲ, ಹಿಂದುಸ್ತಾನಿ ಗಾಯಕ, ಹಾಮೋನಿಯಂ ವಾದಕ. ಕರ್ನಾಟಕ ಸಂಗೀತದ ಮೃದಂಗ ವಾದನವನ್ನೂ ಬಲ್ಲವರು. ಭಾರತೀಯ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತದ ಹದವಾದ ಮಿಶ್ರಣದ ಫ್ಯೂಷನ್ ಮೂಲಕವೂ ಹೆಸರು ಮಾಡಿದವರು. ಕೊಳಲು ತಯಾರಿಕೆ, ವಾದನದಲ್ಲಿ ಹೊಸಪ್ರಯೋಗ ಮಾಡುತ್ತಲೇ ಗಾಡ್ಸ್ ಬನ್ಸಿಯಂಥ ಹೊಸ ವಾದ್ಯವನ್ನೂ ಪರಿಚಯಿಸಿದವರು. ಅವರು ಇದೀಗ ಹಾಡುವ ಗಡಿಯಾರದೊಂದಿಗೆ ಬಂದಿದ್ದಾರೆ! ಈ ಮೂಲಕ ಸಾಹಿತ್ಯ ಲೋಕಕ್ಕೂ ಅಡಿಯಿಟ್ಟಿದ್ದಾರೆ.

ಪ್ರವೀಣ್ ಗೋಡ್ಖಿಂಡಿ ‘ಪ್ರಹರ..ಹಾಡುವ ಗಡಿಯಾರ ’ಹೆಸರಿನ ಕಾದಂಬರಿ ಬರೆದಿದ್ದಾರೆ. ಅದರ ಕಥಾವಸ್ತುವೂ ವಿಶಿಷ್ಟವಾಗಿದೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ದಿನದ 24 ಗಂಟೆಗಳನ್ನು ಮೂರು ತಾಸಿನ 8 ಪ್ರಹರಗಳಾಗಿ ವಿಂಗಡಿಸಲಾಗಿದೆ. ಪ್ರತಿ ಪ್ರಹರದಲ್ಲಿ ಮತ್ತು ಪ್ರತಿ ಗಂಟೆಗೂ ವಿಶಿಷ್ಟ ರಾಗಗಳನ್ನು ನಿಗದಿಪಡಿಸಲಾಗಿದೆ. ಈ ಶಾಸ್ತ್ರವನ್ನು ಪಾಲಿಸುವ ಒಬ್ಬ ಹಿರಿಯ ಸಂಗೀತ ವಿದ್ವಾಂಸ ಮತ್ತು ಅವರ ಮಹೋತ್ತರ ಆವಿಷ್ಕಾರದ ಹಾಡುವ ಗಡಿಯಾರದ ಸುತ್ತ ಹೆಣೆದಿರುವ ಕಥನವಿದು. ಸಂಗೀತಗಾರ ಮಾತ್ರ ಬರೆಯಲು ಸಾಧ್ಯವಿರುವಂಥದು. ಸಂಗೀತ ಚಿಕಿತ್ಸೆ, ರಾಗಗಳ ವರ್ಣನೆ, ರೋಗ ನಿದಾನ, ಕುತೂಹಲ, ಪ್ರೀತಿ, ಸಾವು, ನೋವು, ಗೆಲುವು ಹೀಗೆ ಕಾದಂಬರಿಯೊಂದಕ್ಕೆ ಅಗತ್ಯವಿರುವ ಎಲ್ಲ ಅಂಶಗಳನ್ನೊಳಗೊಂಡ ಪುಸ್ತಕವಿದು. ಧಾರವಾಡ ಭಾಷೆಯಲ್ಲಿ ಮೂಡಿ ಬರುವ ಸಂಭಾಷಣೆಗಳು ಕಾದಂಬರಿಯ ಮತ್ತೊಂದು ಆಕರ್ಷಣೆ.

ಬಹುಪಾಲು ನನ್ನ ಬಾಲ್ಯದ ವಾತಾವರಣ, ಬೆಳೆದು ಬಂದ ರೀತಿ, ಹಿರಿಯ ಸಂಗೀತ ವಿದ್ವಾಂಸರ ಜತೆಗಿನ ಒಡನಾಟ, ನನ್ನ ಬದುಕಿನಲ್ಲಿ ನಡೆದು ಹೋದ ಅನೇಕ ಘಟನೆಗಳು, ವಿಭಿನ್ನ ಸನ್ನಿವೇಶಗಳು ಮತ್ತು ಅಲ್ಲಿ ಬರುವ ಪಾತ್ರಗಳು... ಹೀಗೆ ಇವೆಲ್ಲ ಸೇರಿ ಈ ಕಾದಂಬರಿ ರೂಪುಗೊಂಡಿದೆ. ಇದು ನನ್ನ ಚೊಚ್ಚಲ ಕಾದಂಬರಿ. ಕಥೆ, ನಿರೂಪಣೆ, ಬರವಣಿಗೆ ಇಷ್ಟವಾಗದಿದ್ದರೂ ಶಾಸ್ತ್ರೀಯ ಸಂಗೀತದ ಬಗೆಗಿನ ನನ್ನ ಕಾಳಜಿ ಓದುಗರಿಗೆ ಇಷ್ಟವಾಗಬಹುದೆಂದು ನಂಬಿದ್ದೇನೆ | ಪ್ರವೀಣ್ ಗೋಡ್ಖಿಂಡಿ

ಸಂಗೀತದ ಪ್ರಾಥಮಿಕ ಜ್ಞಾನವಿದ್ದವರಿಗೆ ತೀರ ಆಪ್ತವಾಗುವ ಹಾಗೂ ಆಸಕ್ತಿ ಇಲ್ಲದವರಿಗೆ ಸಂಗೀತ ಶಾಸ್ತ್ರ, ರಾಗದ ವಿವರಗಳನ್ನು, ಒಂದರ್ಥದಲ್ಲಿ ಸಂಗೀತವನ್ನೂ ಪರಿಚಯಿಸುತ್ತ ಸಾಗುವ ಕಾದಂಬರಿಯಿದು. ಈಗಾಗಲೇ ಸಾಹಿತ್ಯ, ಸಂಗೀತ ಕ್ಷೇತ್ರದ ಗಣ್ಯರಾದ ಎಚ್.ಎಸ್.ವೆಂಕಟೇಶಮೂರ್ತಿ, ಪಂ. ವಿನಾಯಕ ತೊರವಿ ಮೊದಲಾದವರು ಕಾದಂಬರಿಯನ್ನು ಓದಿ ಶ್ಲಾಘಿಸಿದ್ದಾರೆ. ಅವರ ಮೆಚ್ಚುಗೆಯ ನುಡಿಗಳು ಕಾದಂಬರಿಯ ಮುನ್ನುಡಿಗಳಾಗಿವೆ. ಬಾಗೂರು ಮಾರ್ಕಾಂಡೇಯ ಅವರ ಕಲೆ ಮುಖಪುಟ ಮಾತ್ರವಲ್ಲದೆ ಒಳಪುಟಗಳನ್ನೂ ಆಕರ್ಷಕಗೊಳಿಸಿವೆ.

ಶುಕ್ರವಾರ ಪುಸ್ತಕ ಬಿಡುಗಡೆ: ಪ್ರವೀಣ್ ಗೋಡ್ಖಿಂಡಿಯವರ ‘ಪ್ರಹರ..ಹಾಡುವ ಗಡಿಯಾರ’ ಕಾದಂಬರಿ ಫೆಬ್ರವರಿ 25 ರಂದು ಬೆಂಗಳೂರಿನ ಸಿ.ಅಶ್ವಥ್ ಕಲಾಭವನದಲ್ಲಿ ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ಸಪ್ನ ಬುಕ್​ಹೌಸ್ ಪ್ರಕಟಿಸಿರುವ ಈ ಪುಸ್ತಕವನ್ನು ಸಂಸದ ತೇಜಸ್ವಿ ಸೂರ್ಯ ಬಿಡುಗಡೆ ಮಾಡಲಿದ್ದಾರೆ. ಎಚ್.ಎಸ್.ವೆಂಕಟೇಶಮೂರ್ತಿ, ಪಂ. ವಿನಾಯಕ ತೊರವಿ, ಜಯಂತ ಕಾಯ್ಕಿಣಿ, ಪಿ.ಶೇಷಾದ್ರಿ, ಯಶವಂತ ಸರದೇಶಪಾಂಡೆ, ಜೋಗಿ, ಸುರೇಂದ್ರನಾಥ, ಬಿ.ವಿ.ಶ್ರೀನಿವಾಸ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net