

ಶಿವಮೊಗ್ಗ: ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಜತೆಗೆ ದೇಶದ ಸಂಸ್ಕೃತಿ, ಪರಂಪರೆಯನ್ನು ಬೆಳೆಸಲು, ಅವರನ್ನು ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಶಿಕ್ಷಣ ಇಲಾಖೆಯಿಂದ ಎನ್‌ಇಎಸ್ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪಠ್ಯಪ್ರವೃತ್ತಿ ಬೆಳೆಸುವುದು ಮಾತ್ರವಲ್ಲದೆ ಅವರ ಪ್ರತಿಭೆಯನ್ನು ಹೊರತರಲು ಇದರಿಂದ ಸಾಧ್ಯ ಎಂದರು.
ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಪದ್ಧತಿಯ ಯೋಚನೆಗಳನ್ನಿಟ್ಟುಕೊಂಡು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಆಯೋಜಿಸಲಾಗಿದೆ. ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಅವರಿಗೆ ಉತ್ತೇಜನ ನೀಡಿದರೆ ಮಾತ್ರ ಉತ್ತಮ ಕಲಾವಿದರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಪಾತ್ರ ಹಿರಿದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಸರ್ಕಾರ ಮಕ್ಕಳ ಕಲಾ ಚಟುವಟಿಕೆ ಪ್ರದರ್ಶಿಸಲು ಅನೇಕ ಅವಕಾಶ ಕಲ್ಪಿಸಿದೆ. ಹಿಂದೆ ಶಿಕ್ಷಣಕ್ಕೆ ಮಾತ್ರ ಹೆಚ್ಚು ಮನ್ನಣೆ ಇತ್ತು. ಇಂದು ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಲಾಗುತ್ತಿದೆ. ವೈವಿಧ್ಯಮಯವಾದ ನಮ್ಮ ದೇಶದಲ್ಲಿ ಸಂಸ್ಕೃತಿ ವಿಭಿನ್ನ ರೀತಿಯಲ್ಲಿದೆ. ಅದನ್ನು ಉಳಿಸಲು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಿದೆ ಎಂದರು.
ಡಿಡಿಪಿಐ ಎಸ್.ಆರ್.ಮಂಜುನಾಥ್, ಬಿಇಒ ರಮೇಶ್, ಎ.ಕೆ.ನಾಗೇಂದ್ರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ ಇತರರಿದ್ದರು.