ಪ್ರತಾಪ್, ಕಟೀಲ್ ಕೈಬಿಟ್ಟಿದ್ದು ಬಿಜೆಪಿಯ ದುರ್ಬಲ ತಂತ್ರಗಾರಿಕೆ; ಡಿ.ಕೆ ಶಿವಕುಮಾರ್ ವ್ಯಾಖ್ಯಾನ

DK Shivakumar
Published on

ಬೆಂಗಳೂರು: ಬಿಜೆಪಿ ಗೊಂದಲದ ಗೂಡಾಗಿದೆ. ಸದಾನಂದ ಗೌಡರು, ನಳೀನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಸೇರಿದಂತೆ ನಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಏಕಾಏಕಿ ಸ್ಪರ್ಧೆಯಿಂದ ಕೈಬಿಟ್ಟಿದ್ದಾರೆ. 40 ವರ್ಷ ರಾಜಕಾರಣ ಮಾಡಿಕೊಂಡು ಬಂದವರನ್ನು ಈ ರೀತಿ ಕೈಬಿಟ್ಟರೆ ಹೇಗೆ? ಬಿಜೆಪಿ ಇಂತಹ ದುರ್ಬಲ ತಂತ್ರಗಾರಿಕೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎದುರಾಳಿಯ ಕಾರ್ಯತಂತ್ರವನ್ನು ವ್ಯಾಖ್ಯಾನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಭವಿಷ್ಯದಲ್ಲಿ 30-40 ವರ್ಷಗಳ ಕಾಲ ರಾಜಕಾರಣ ಮಾಡಬಲ್ಲ ಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇವೆ. ಇವರು ರಾಜಕೀಯವಾಗಿ ಪಕ್ಷಕ್ಕೆ ಅಡಿಪಾಯ ಆಗಲಿದ್ದಾರೆ ಎಂದರು.

ಜೆಡಿಎಸ್ ನಾಯಕರಿಗೆ ಬೆನ್ನಿಗೆ ಚೂರಿ ಹಾಕಿದ್ದೀರಿ ಎಂಬ ಆ ಪಕ್ಷದ ಆರೋಪದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಅಮೃತ ಕೊಟ್ಟವರಿಗೆ ಬೆನ್ನಿಗೆ ಚೂರಿ ಹಾಕಿದರು ಎನ್ನುತ್ತಾರೆ. ನಾವು ಎಲ್ಲಿ ಚೂರಿ ಹಾಕಿದ್ದೇವೆ? 38 ಸ್ಥಾನ ಗೆದ್ದವರಿಗೆ ಐದು ವರ್ಷ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದು ವಿಷವೇ? ಅವರ ಜತೆ ನಿಂತು ಹಗಲಿರುಳು ಹೋರಾಟ ಮಾಡಿದ್ದು ವಿಷವೇ? ನನ್ನ ಆತ್ಮಶಕ್ತಿ, ನಾನು ನಂಬಿರುವ ಶಕ್ತಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ನಾನು ಏನು ಮಾಡಿದ್ದೇನೆ ಎಂದು ಗೊತ್ತಿದೆ ಎಂದು ಡಿಕೆಶಿ ತಿಳಿಸಿದರು.

ಕಾಂಗ್ರೆಸ್‌ನಿಂದ ಆಹ್ವಾನವಿದೆ ನಾನು ಇನ್ನೂ ತೀರ್ಮಾನ ಮಾಡಿಲ್ಲ ಎಂಬ ಮಂಡ್ಯ ಸಂಸದೆ ಸುಮಲತಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರಿಗೆ ಸಹಾಯ ಮಾಡಿದವರ ಉಪಕಾರ ತೀರಿಸಬೇಕು ಎಂದಿದ್ದರೆ ಅವರು ತೀರ್ಮಾನ ಮಾಡಲಿ ಎಂದು ತಿಳಿಸಿದರು.

ಸುಮಲತಾ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರಿಗೂ ಜೆಡಿಎಸ್ ನಾಯಕರಿಗೆ ನಡೆದ ಮಾತಿನ ಕಾಳಗ ಹಾಗೂ ಅವರು ಸ್ವಾಭಿಮಾನದ ಹೆಸರಲ್ಲಿ ಮತಯಾಚನೆ ಮಾಡಿದ್ದಕ್ಕೆ ಅವರು ಬದ್ಧರಿದ್ದರೆ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಆಲೋಚನೆ ಮಾಡಬಹುದು. ಅವರ ಬದ್ಧತೆ ಬದಲಾಗದಿದ್ದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ತೀರ್ಮಾನವನ್ನು ಸ್ಥಳೀಯ ನಾಯಕರಿಗೆ ಬಿಡುತ್ತೇವೆ. ಸ್ಥಳೀಯ ಮಟ್ಟದಲ್ಲಿ ಎಲ್ಲರೂ ಒಪ್ಪಿದಾಗ ಹೈಕಮಾಂಡ್ ನಾಯಕರು ಯಾರನ್ನು ಕೈ ಬಿಡುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ಅಮಿತ್ ಷಾ ಅವರು ಪ್ರಚಾರಕ್ಕೆ ಚನ್ನಪಟ್ಟಣವನ್ನೇ ಯಾಕೆ ಆಯ್ಕೆ ಮಾಡಿದ್ದಾರೆ ಎಂದರೆ ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಂದಾಗಿದ್ದು, ಕಾರ್ಯಕರ್ತರು ಒಂದಾಗುತ್ತಿಲ್ಲ. ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ದಿನ ಬೆಳಗಾದರೆ ರಾಜಕೀಯ ಸಂಘರ್ಷ ಮಾಡುತ್ತಿದ್ದಾರೆ. ಈ ಮೈತ್ರಿಯಿಂದ ಏನಾಗಲಿದೆ ಎಂಬ ಅನುಭವ ಯೋಗೇಶ್ವರ್‌ಗೆ ಇಲ್ಲ ಎಂದು ಡಿಕೆಶಿ ಹೇಳಿದರು.

ಅಮಿತ ಷಾ ಬಂದರೆ ಬಲ ಬರಬಹುದು ಎಂದು ಮಾಡುತ್ತಿದ್ದಾರೆ. ಇಬ್ಬರೂ ಸೇರಿ ಕಾರ್ಯಕರ್ತರ ಸಭೆ ಯಾಕೆ ಮಾಡಲಿಲ್ಲ? ಇವರಿಬ್ಬರೂ ಒಂದಾದ ತಕ್ಷಣ ಕಾರ್ಯಕರ್ತರು ಒಂದಾಗುತ್ತಾರಾ? ರಾಮನಗರ ಹಾಗೂ ಮಂಡ್ಯ ಜಿಲ್ಲೆ ರಾಜಕಾರಣ ನೋಡಲು ಆಗುತ್ತಿಲ್ಲ ಎಂದರು.

ಹೆಣ್ಣು ಕುಟುಂಬದ ಕಣ್ಣು. ಕಾಂಗ್ರೆಸ್ ಶಾಮನೂರು ಶಿವಶಂಕರಪ್ಪ ಅವರ ಮಾತನ್ನು ಒಪ್ಪುವುದಿಲ್ಲ. ಅವರಿಗೆ ವಯಸ್ಸಾಗಿದೆ. ಅವರು ಯಾವ ಲೆಕ್ಕಾಚಾರದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ಮಹಿಳೆಯರ ಸಬಲೀಕರಣಕ್ಕೆ ಬದ್ಧವಾಗಿದೆ. ಅವರ ಸೊಸೆ ಸೇರಿದಂತೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಆರು ಮಹಿಳೆಯರನ್ನು ಕಣಕ್ಕೆ ಇಳಿಸಿದ್ದೇವೆ. ನಮ್ಮ ಕಾರ್ಯಕ್ರಮಗಳು ಮಹಿಳೆ ಕೇಂದ್ರಿತವಾಗಿದೆ. ಅವರ ಬದುಕಿಗೆ ಸಂಬಂಧಿಸಿದೆ. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಖಂಡನೀಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net