

ಪಾಟ್ನಾ: ಬಿಹಾರದ ಚುನಾವಣೆಯಲ್ಲಿ (Bihar Election) ತುಂಬಾ ಸದ್ದು ಮಾಡಿದ್ದ, ರಾಜ್ಯದ ಜನತೆಯ ಪಾಲಿನ ಪರ್ಯಾಯ ರಾಜಕೀಯ ಶಕ್ತಿ ಎಂಬಂತೆ ಬಿಂಬಿತವಾಗಿದ್ದ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ, ಹೇಳಿಕೊಳ್ಳುವ ರೀತಿಯ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ ಎಂದು ಸಮೀಕ್ಷಾ ಸಂಸ್ಥೆಗಳು ಅಭಿಪ್ರಾಯಪಟ್ಟಿದ್ದು, ಆಡಳಿತರೂಢ ಎನ್‌ಡಿಎ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ.
ಇತ್ತೀಚೆಗೆ ನಿರ್ಗಮನ ಸಮೀಕ್ಷೆಯ ಭವಿಷ್ಯವಾಣಿಗಳು ಸರಿಯಾಗಿದ್ದಕ್ಕಿಂತ, ತಪ್ಪಾಗಿರುವುದೇ ಹೆಚ್ಚು. ಅದಕ್ಕೆ 2024 ರ ಲೋಕಸಭಾ ಚುನಾವಣೆ, ಹರಿಯಾಣ ವಿಧಾನಸಭಾ ಚುನಾವಣೆ ಸಾಕ್ಷಿ. ಆದ್ದರಿಂದ ಫಲಿತಾಂಶ ಹೊರಬೀಳುವವರೆಗೂ ಕಾಯಲೇಬೇಕಿದೆ.
ಪ್ರಮುಖ ಸಮೀಕ್ಷೆಗಳ ಪ್ರಕಾರ, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ 122 ಸ್ಥಾನ ಪಡೆದು ಅಧಿಕಾರಕ್ಕೇರಲಿದೆ ಎಂದಿದ್ದು, ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಸುಮಾರು 70-108 ಆಸುಪಾಸಿನಲ್ಲಿ ಸ್ಥಾನಗಳನ್ನು ಪಡೆಯಬಹುದು ಎನ್ನಲಾಗಿದೆ. ಆದರೆ ರಾಜ್ಯದ ಪಾಲಿಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಕಂಡಿದ್ದ ಕಿಶೋರ್ ಅವರ ಜನ್ ಸುರಾಜ್ ಪಕ್ಷ (ಜೆಎಸ್‌ಪಿ) ಅಬ್ಬರದ ಪ್ರಚಾರದ ಹೊರತಾಗಿಯೂ ಸ್ಥಾನಗಳಿಸಲು ವಿಫಲವಾದಂತೆ ಕಾಣುತ್ತಿದೆ.
1. ದೈನಿಕ್ ಭಾಸ್ಕರ್ 0-3
2. ಚಾಣಕ್ಯ ಸ್ಟ್ರಾಟರ್ಜೀಸ್ 0
3. ಮ್ಯಾಟ್ರಿಜ್ 0-2
4. ಪಿ-ಮಾರ್ಕ್ 1-4
5. ಪೀಪಲ್ ಇನ್‌ಸೈಟ್ 0-2
6. ಡಿವಿ ರೀಸರ್ಚ್ 2-4
7. ಜೆವಿಸಿ 0-1
ಸುಮಾರು ಮೂರು ವರ್ಷಗಳ ಕಾಲ ರಾಜ್ಯಾದ್ಯಂತ ಪಾದಯಾತ್ರೆ ನಡೆಸಿದ ಕಿಶೋರ್, ಕಳೆದ ವರ್ಷ ಜನ್ ಸುರಾಜ್ ಪಕ್ಷವನ್ನು ಸ್ಥಾಪಿಸಿದ್ದರು. ಒಂದು ಕಾಲದಲ್ಲಿ ನಿತೀಶ್ ಮತ್ತು ನರೇಂದ್ರ ಮೋದಿಯ ಚುನಾವಣೆಗೆ ಪ್ರಚಾರ ತಂತ್ರ ಹೆಣೆಯುತ್ತಿದ್ದು ಕಿಶೋರ್, ಈ ಚುನಾವಣೆಯಲ್ಲಿ ಜಾತಿ ಸಮೀಕರಣಗಳ ಬದಲು, ಉದ್ಯೋಗಗಳು, ಶಿಕ್ಷಣ ಮತ್ತು ವಲಸೆಯ ಬಗ್ಗೆ ಮಾತನಾಡಿದ್ದರು. ಅವರ ಪಕ್ಷದ ಪ್ರಚಾರದಲ್ಲಿ ಜನಸೇರದಿರು ಕೂಡ ಅವು ಮತಗಳಾಗಿ ಪರಿವರ್ತನೆಯಾಗಿಲ್ಲ ಎನ್ನುವುದನ್ನು ಸಮೀಕ್ಷೆಗಳು ಹೇಳುತ್ತಿವೆ.(ಏಜೆನ್ಸೀಸ್)