ಪ್ರಾಣಾಯಾಮದಲ್ಲಿದೆ ದೀರ್ಘಾಯುಷ್ಯ, ದೀರ್ಘಾರೋಗ್ಯದ ಗುಟ್ಟು

yopga
Published on
 ‘ಶ್ವಾಸ ಪ್ರಶ್ವಾಸಯೋರ್ಗತಿ ವಿಚ್ಛೇದ ಪ್ರಾಣಾಯಾಮಃ’ ಎಂದು ಪತಂಜಲಿ ಮಹರ್ಷಿ ಪ್ರಾಣಾಯಾಮವನ್ನು ಸೂತ್ರೀಕರಿಸಿದ್ದಾರೆ. ಎಂದರೆ ಉಚ್ಛಾ್ವಸ-ನಿಶ್ವಾಸಗಳ ಗತಿಯನ್ನು ವಿಚ್ಛೇದಿಸುವುದೇ ಪ್ರಾಣಾಯಾಮ. ಸಹಜವಾದ ಉಸಿರಾಟದಲ್ಲಿ ನಾವು ಶ್ವಾಸವನ್ನು ತೆಗೆದುಕೊಳ್ಳುವ ಅವಧಿ ಹೆಚ್ಚು. ಬಿಡುವ ಅವಧಿ ಕಡಿಮೆ. ಅಂದರೆ ನಾಲ್ಕು ಎಣಿಕೆಯಷ್ಟು ಶ್ವಾಸವನ್ನು ಒಳಗೆ ತೆಗೆದುಕೊಳ್ಳುತ್ತೇವೆಂದಾದರೆ ಮೂರು-ಮೂರುವರೆ ಎಣಿಕೆಯಷ್ಟರಲ್ಲಿ ಉಸಿರನ್ನು ಹೊರಗೆ ಬಿಡುತ್ತೇವೆ.

ಈ ಪ್ರಮಾಣವನ್ನು ಬದಲಾಯಿಸಿ ಶ್ವಾಸ ಬಿಡುವ ಅವಧಿಯನ್ನು ದೀರ್ಘಗೊಳಿಸುವ ಪ್ರಯತ್ನ ಪೂರ್ವಕ ಅಭ್ಯಾಸವನ್ನು ಪ್ರಾಣಾಯಾಮದಲ್ಲಿ ಮಾಡುತ್ತೇವೆ. ಕಾರಣವೆಂದರೆ ದೀರ್ಘಶ್ವಾಸದ ಅಭ್ಯಾಸ ದೀರ್ಘಾಯುಷ್ಯದ ಗುಟ್ಟು. ದೀರ್ಘ ಆರೋಗ್ಯದ ಗುಟ್ಟು. ವೇಗಗತಿಯ ಉಸಿರಾಟ ಮಾಡುವ ಮೊದಲ ಆಯುಷ್ಯ 8ರಿಂದ 10 ವರ್ಷಗಳು ಮಾತ್ರ. ನಾಯಿಗಳ ಉಸಿರಾಟವನ್ನು ಗಮನಿಸಿ. ಅತ್ಯಂತ ವೇಗಗತಿ. ಅವುಗಳ ಆಯುಷ್ಯ 10ರಿಂದ 15ವರ್ಷ. ಪ್ರಪಂಚದಲ್ಲಿ ದೀರ್ಘಕಾಲ ಬದುಕುವ ಪ್ರಾಣಿ ಯಾವುದು ಗೊತ್ತೇ? ಆಮೆ. ಅದು 150ರಿಂದ 200 ವರ್ಷಗಳ ಕಾಲ ಬದುಕುವುದಂತೆ ! ಕಾರಣ ಅದು ಒಂದು ನಿಮಿಷಕ್ಕೆ ಕೇವಲ 2 ರಿಂದ 3 ಬಾರಿ ಮಾತ್ರ ಉಸಿರಾಟ ಮಾಡುವುದು. ಹಾಗಾಗಿ ದೀರ್ಘ ನಿಶ್ವಾಸದ ಅಭ್ಯಾಸ- ದೀರ್ಘಾಯುಷ್ಯ, ದೀರ್ಘಾರೋಗ್ಯದ ಗುಟ್ಟು ಎಂಬುದನ್ನು ನಾವು ಮನಗಾಣಬೇಕು. ಇದಕ್ಕಾಗಿಯೇ ಪ್ರಾಣಾಯಾಮವನ್ನು ಶ್ರದ್ಧೆಯಿಂದ ಪ್ರಯತ್ನ ಪೂರ್ವಕವಾಗಿ ಅಭ್ಯಾಸ ಮಾಡಬೇಕು.

ನಮ್ಮ ಹಿಂದಿನ ತಲೆಮಾರಿನ ಜನಾಂಗ ಯಾವುದೇ ಆಸನ, ಪ್ರಾಣಾಯಾಮಗಳ ಶಾಸ್ತ್ರೀಯ ಅಭ್ಯಾಸವಿಲ್ಲದೆಯೂ ನಮ್ಮ ನಮ್ಮ ಮನೆಗಳಲ್ಲಿಯೇ ನೂರಕ್ಕೂ ಮಿಗಿಲು ವರ್ಷ ಬಾಳಿದವರಿದ್ದಾರಲ್ಲ ಎಂದು ಪ್ರಶ್ನಿಸಬಹುದು. ಇದೂ ಸಹಜವೇ. ಆದರೆ ಅವರು ಪ್ರಾಣಾಯಾಮ ಎಂಬ ಹೆಸರಿನಿಂದ ಮಾಡದಿದ್ದರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಪ್ರಾಣಾಯಾಮ ಕ್ರಮವನ್ನು ಅಳವಡಿಸಿಕೊಂಡಿದ್ದುದನ್ನು ಕಾಣಬಹುದು. ಮಂತ್ರಗಳ ಉಚ್ಛಾರಣೆಯನ್ನು ತೆಗೆದುಕೊಳ್ಳಿ. ಅಲ್ಲಿ ಶುದ್ಧ ಪ್ರಾಣಾಯಾಮದ ಕ್ರಮ ಅಳವಡಿಕೆಯಾಗಿದೆ. ಶ್ವಾಸ ತೆಗೆದುಕೊಳ್ಳುವ ಅವಧಿ ಕಡಿಮೆ. ರೇಚಕದ ಅವಧಿ ಮೂರು ಪಟ್ಟು, ನಾಲ್ಕು ಪಟ್ಟು, ಅದಕ್ಕಿಂತಲೂ ಹೆಚ್ಚು. ಪೂಜೆ, ಜಪ ಮಾಡುವಾಗ ‘ಆಸನ, ಪ್ರಾಣಾಯಾಮವೇ ವಿನಿಯೋಗಃ’ ಕೇಳಿದ್ದೇವಲ್ಲವೇ? ಹಾಗಾಗಿ ಅಲ್ಲಿಯೂ ಆಸನ, ಪ್ರಾಣಾಯಾಮಗಳು ರೂಢಿಯಲ್ಲಿದ್ದವು. ಭಜನೆಗಳನ್ನು ಹೇಳುವಾಗ ದೀರ್ಘ ರೇಚಕದ ಅಭ್ಯಾಸ ಗಮನಿಸಬಹುದು.

ನಮ್ಮ ಗ್ರಾಮೀಣ ಜನರು ಬೀಸುವಾಗ, ಕಟ್ಟುವಾಗ, ನೆಟ್ಟಿ ಮಾಡುವಾಗ, ಕೊಯ್ಲು ಮಾಡುವಾಗ ಇಂತಹ ಸಂದರ್ಭಗಳಲ್ಲಿ ಮಗುವನ್ನು ಮಲಗಿಸಲು ಹಾಡುವ ಜೋಗುಳದ ಹಾಡುಗಳನ್ನು ಹೇಳುವ ಸಂದರ್ಭದಲ್ಲಿಯೂ ಈ ದೀರ್ಘ ರೇಚಕವನ್ನು ಗಮನಿಸಬಹುದಲ್ಲವೇ? ಆದರೆ ಇಂದು ಇವುಗಳು ಕಣ್ಮರೆಯಾಗುತ್ತಿವೆ! ಮಗುವನ್ನು ಜೋಗುಳ ಹಾಡುತ್ತ ತೊಟ್ಟಿಲು ತೂಗಿ ಮಲಗಿಸುವ ಅಭ್ಯಾಸ ಇಂದು ಎಷ್ಟು ಮನೆಗಳಲ್ಲಿ ಕಾಣಬಹುದು ಹೇಳಿ? ಭಜನೆಗಳು ಎಷ್ಟು ಕಡೆ ಇವೆ? ಇದ್ದರೂ ಅದಕ್ಕೆ ಸೇರುವ ಜನ ಎಷ್ಟು? ಹಾಗಾಗಿಯೇ ಪ್ರಾಣಾಯಾಮದ ಪ್ರಯತ್ನಪೂರ್ವಕ ಅಭ್ಯಾಸದ ಅನಿವಾರ್ಯತೆ ಬಂದಿದೆ.

ನಾವು ತೆಗೆದುಕೊಳ್ಳುವ ಶ್ವಾಸ ಐದು ರೀತಿಯಲ್ಲಿ ಶರೀರದಲ್ಲಿ ತನ್ನ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪಂಚಪ್ರಾಣಗಳು ಎನ್ನುತ್ತೇವೆ. ಪ್ರಾಣ, ಅಪಾನ, ಉದಾನ, ಸಮಾನ, ವ್ಯಾನ ಇವುಗಳು ಪಂಚಪ್ರಾಣಗಳು. ಮುಖ, ಮೂಗು, ಕಣ್ಣು ಇವುಗಳ ಚಟುವಟಿಕೆಗಳಿಗೆ ಕೇಂದ್ರ ಪ್ರಾಣ. ಜನನೇಂದ್ರಿಯಗಳು, ವಿಸರ್ಜನಾಂಗಗಳು ಇತ್ಯಾದಿ ಕೆಳಭಾಗದ ಚಟುವಟಿಕೆಗಳ ಕೇಂದ್ರ ಅಪಾನಪ್ರಾಣ. ತೇಗು, ವಾಂತಿ, ನಿಶ್ವಾಸ, ಕುಂಡಲಿನಿ ಜಾಗೃತಿ ಇತ್ಯಾದಿ ಹೊಟ್ಟೆಯ ಮೇಲ್ಭಾಗದ ಚಟುವಟಿಕೆಗಳನ್ನು ನಡೆಸುವುದು ಉದಾನಪ್ರಾಣ. ತಿಂದ ಆಹಾರವನ್ನು ಜೀರ್ಣಗೊಳಿಸುವ ಚಟುವಟಿಕೆ ನಡೆಸುತ್ತಾ ಹೊಟ್ಟೆಯ ಭಾಗದಲ್ಲಿ ಕಾರ್ಯನಿರ್ವಹಿಸುವುದು ಸಮಾನ ಪ್ರಾಣ. ಇಡೀ ಶರೀರ ವ್ಯಾಪಿಯಾಗಿ ಸ್ಪರ್ಶವೇ ಮೊದಲಾದ ಸಂವೇದನೆಗಳಿಗೆ ಕಾರಣವಾಗಿರುವುದು ವ್ಯಾನ ಪ್ರಾಣ. ಈ ಪಂಚಪ್ರಾಣಗಳ ಸಮರ್ಪಕ ಕಾರ್ಯನಿರ್ವಹಣೆಗೂ ಪ್ರಾಣಾಯಾಮ ಸಹಾಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net