ನಾವು ಯಾರು ಅವರ ಬಗ್ಗೆ ಕಾಮೆಂಟ್​ ಮಾಡುವುದಕ್ಕೆ? ರಶ್ಮಿಕಾ ಬಗ್ಗೆ ಪ್ರಮೋದ್​ ಶೆಟ್ಟಿ ಪ್ರಶ್ನೆ …

Pramod - Rashmika
Published on

ಬೆಂಗಳೂರು: ರಿಷಭ್​ ಶೆಟ್ಟಿ ನಿರ್ದೇಶನದ 'ಕಿರಿಕ್​ ಪಾರ್ಟಿ' ಮೂಲಕ ನಟಿಯಾದವರು ರಶ್ಮಿಕಾ ಮಂದಣ್ಣ. ಆ ನಂತರ ಅವರು ಪ್ಯಾನ್​ ಇಂಡಿಯಾ ನಟಿಯಾಗಿ ಬೆಳೆದಿದ್ದು ಇತಿಹಾಸ. ಅದೇ ರಶ್ಮಿಕಾ, ರಿಷಭ್​ ನಿರ್ದೇಶನದ 'ಕಾಂತಾರ' ಚಿತ್ರವನ್ನು ನೋಡಲಿಲ್ಲ, ಆ ಚಿತ್ರದ ಬಗ್ಗೆ ಏನೂ ಮಾತನಾಡಲಿಲ್ಲ ಎಂಬುದು ಸಾಕಷ್ಟು ಸುದ್ದಿಯಾಗಿತ್ತು. ರಶ್ಮಿಕಾಗೆ ಅಹಂಕಾರ, ಅವರು ಹತ್ತಿದ ಏಣಿಯನ್ನೇ ಒಡೆದಯುತ್ತಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದರು.

ಈ ಟೀಕೆಗಳು ಅತಿರೇಕಕ್ಕೆ ಹೋಗಿ, ಈಗ ಈ ಬಗ್ಗೆ ನಟ ಪ್ರಮೋದ್​ ಶೆಟ್ಟಿ ಮಾತನಾಡಿದ್ದಾರೆ. 'ಕಿರಿಕ್​ ಪಾರ್ಟಿ' ಚಿತ್ರದಲ್ಲಿ ನಟಿಸಿದ್ದ ಪ್ರಮೋದ್​, ರಶ್ಮಿಕಾ ಅವರನ್ನು ಬಹಳ ಹತ್ತಿರದಿಂದ ಬಲ್ಲವರು. 'ಕಾಂತಾರ' ಚಿತ್ರವನ್ನು ರಶ್ಮಿಕಾ ನೋಡಲಿಲ್ಲವಂತೆ ಎಂಬ ದೂರಿಗೆ ಪ್ರತಿಕ್ರಿಯಿಸಿರುವ ಅವರು, ರಶ್ಮಿಕಾ ಚಿತ್ರ ನೋಡದಿದ್ದರೆ ಏನಂತೆ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ''ಕಾಂತಾರ' ಚಿತ್ರವನ್ನು ರಶ್ಮಿಕಾ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಬಹುಶಃ ಅವರು ಸಿನಿಮಾ ನೋಡಿರುತ್ತಾರೆ. ಅವರಿಗೆ ಸಿನಿಮಾಗಳೆಂದರೆ ಇಷ್ಟ. ಆದರೆ, ಕಾಮೆಂಟ್​ ಮಾಡಲಿಲ್ಲವೇನೋ? ಅಥವಾ ನೋಡದಿರುವ ಸಾಧ್ಯತೆಯೂ ಇರಬಹುದು. ಏಕೆಂದರೆ, ಅವರ ಹಿಂದಿ ಚಿತ್ರದ ಪ್ರಮೋಷನ್​ನಲ್ಲಿ ಅವರು ತೊಡಗಿಸಿಕೊಂಡಿದ್ದರು. ಕಾಂತಾರ ಬಿಡುಗಡೆಯಾದ ಮರುವಾರವೇ ಅವರ 'ಗುಡ್​ಬೈ' ಚಿತ್ರ ಬಿಡುಗಡೆಯಾಯಿತು. ಅದರ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದರು. ಫ್ರೀಯಾದಾಗ ನೋಡುತ್ತಾರೆ. ನೋಡಿ ಕಾಮೆಂಟ್​ ಮಾಡುತ್ತಾರೆ. ನೀವೆಲ್ಲರೂ ಆರಾಮಾಗಿರಿ. ಅವರು ನೋಡಲಿಲ್ಲ ಅಂತ ನೀವು ನೋಡದೇ ಇರೋದಕ್ಕೆ ಹೋಗಬೇಡಿ' ಎಂದು ಹೇಳಿದ್ದಾರೆ.

'ಯಾರೇ ಆಗಲೀ, ಮೊದಲ ಹೆಜ್ಜೆ ಇಟ್ಟ ಜಾಗದಲ್ಲೇ ಇರಬೇಕು ಎಂದು ಯಾರೂ ಬಯಸುವುದಿಲ್ಲ. ಪ್ರತಿಯೊಬ್ಬರು ಸಹ ಒಂದೊಂದೇ ಮೆಟ್ಟಿಲು ಹತ್ತಿಕೊಂಡು ಮೇಲಕ್ಕೆ ಹೋಗುವುದಕ್ಕೆ ಬಯಸುತ್ತಾರೆ. ಆ ಅದೃಷ್ಟ ಅವರ ಕೈ ಹಿಡಿದಿದೆ. ಅವರಿಗೆ ಛಲ ಇದೆ. ಹಾಗಾಗಿ, ಆ ಎತ್ತರಕ್ಕೆ ಹೋಗಿದ್ದಾರೆ. ಯಾವತ್ತೂ, ಒಬ್ಬರು ಬೆಳೆದರು ಎಂಬ ಕಾರಣಕ್ಕೆ ನಾವು ಅವರ ಬಗ್ಗೆ ಕಾಮೆಂಟ್​ ಮಾಡುವುದಾಗಲೀ, ಒಬ್ಬರು ನಮ್ಮನ್ನು ಬಿಟ್ಟು ಹೋದರು ಎಂದು ಕಾಮೆಂಟ್​ ಮಾಡುವುದಾಗಲೀ, ಅದು ನಮ್ಮನ್ನು ಚಿಕ್ಕವರನ್ನಾಗಿ ಮಾಡುತ್ತಾ ಹೋಗುತ್ತದೆ. ನಾವು ಬೆಳೆದಿದ್ದೇವೆ. ನಾವು ದೊಡ್ಡವರಾಗಿದ್ದೇವೆ. ನಮಗೂ ವಯಸ್ಸಾಗಿದೆ. ಆ ಪ್ರಬುದ್ಧತೆ ನಮಗೂ ಬೇಕು. ಹಾಗಾಗಿ, ಸುಮ್ಮನೆ ಕಾಮೆಂಟ್​ ಮಾಡಬಾರದು. ಅವರು ಅವರ ಹಾದಿಯಲ್ಲಿ, ಅವರ ಜೀವನವನ್ನು ಕಟ್ಟಿಕೊಳ್ಳುವುದಕ್ಕೆ ಹೋಗುತ್ತಿರುವಾಗ, ನಾವು ಯಾರು ಕಾಮೆಂಟ್​ ಮಾಡುವುದಕ್ಕೆ? ಎಂದು ಪ್ರಶ್ನಿಸಿದ್ದಾರೆ.

ಪ್ರಮೋದ್​ ಶೆಟ್ಟರೇ ಇಷ್ಟೆಲ್ಲ ಹೇಳಿರುವಾಗ, ಇನ್ನಾದರೂ ರಶ್ಮಿಕಾ ಕುರಿತ ಗಲಾಟೆಗಳು ಕಡಿಮೆಯಾಗುತ್ತದಾ ಎಂಬುದನ್ನ ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net