

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ನಟ ಪ್ರಕಾಶ್ ರಾಜ್(Prakash Raj) ಹಲವಾರು ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ತಿರುಮಲ ಪ್ರಸಾದ ಲಡ್ಡು ಪ್ರಕರಣದ ನಂತರ ಪ್ರಕಾಶ್ ರಾಜ್ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬರುತ್ತಿದೆ. ನಟ ಪ್ರಕಾಶ್ ರಾಜ್ ನನಗೆ ಮೋಸ ಮಾಡಿ 1 ಕೋಟಿ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ನಿರ್ಮಾಪಕ ವಿನೋದ್ ಕುಮಾರ್ ಆರೋಪಿಸಿದ್ದಾರೆ. ವಿನೋದ್ ಮಾಡಿರುವ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರಕಾಶ್ ರಾಜ್ ಅವರು ಇತ್ತೀಚೆಗೆ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರೊಂದಿಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ವಿನೋದ್ ಕುಮಾರ್, ನಿಮ್ಮ ಪಕ್ಕದಲ್ಲಿ ಕುಳಿತಿರುವವರು ಚುನಾವಣೆಯಲ್ಲಿ ಗೆದ್ದಿದ್ದಾರೆ. ನೀವು ಠೇವಣಿಯನ್ನೂ ಕಳೆದುಕೊಂಡಿದ್ದೀರಿ. ಅದೇ ನಿಮ್ಮ ನಡುವಿನ ವ್ಯತ್ಯಾಸ. ಸಿನಿಮಾದ ಸೆಟ್ನಲ್ಲಿ ನಮ್ಮೊಂದಿಗೆ ಒಂದು ಮಾತನ್ನೂ ಹೇಳದೆ ನೀವು ಕಾರವಾನ್ನಿಂದ ನಾಪತ್ತೆಯಾಗಿದ್ದೀರಿ. ಇದರಿಂದ ನನ್ನ ಶೂಟಿಂಗ್ ಸೆಟ್ನಲ್ಲಿ 1 ಕೋಟಿ ರೂಪಾಯಿ ನಷ್ಟ ಮಾಡಿದ್ದೀರಿ. ಹಾಗೆ ಮಾಡಲು ಕಾರಣವೇನು? #ಜಸ್ಟ್ ಆ್ಯಸ್ಕಿಂಗ್!!! ಫೋನ್ ಮಾಡುವುದಾಗಿ ಹೇಳಿ ಇನ್ನೂ ಮಾಡಿಲ್ಲ!! ಎಂದು ಪೋಸ್ಟ್ ಮಾಡಿದ್ದಾರೆ.
ನಿರ್ಮಾಪಕರು ಯಾವ ಸಿನಿಮಾ ಕುರಿತು ಮಾತನಾಡಿದ್ದಾರೆ ಎಂಬುದನ್ನು ತಿಳಿಸಿಲ್ಲ. ಆದರೆ ವಿನೋದ್ ಕುಮಾರ್ ಅವರ ಹೇಳಿಕೆಗೆ ಪ್ರಕಾಶ್ ರಾಜ್ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಪೋಸ್ಟ್ ನೋಡಿದ ಜನರು ಯಾವ ಚಿತ್ರ ಎಂದು ಊಹಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೂ ಮೊದಲು 2021ರಲ್ಲಿ ತೆರೆಕಂಡ ತಮಿಳು ಚಿತ್ರ ‘ಎನಿಮಿ’ಯಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು.
‘ಎನಿಮಿ’, ‘ಮಾರ್ಕ್ ಆಂಟನಿ’, ‘ಲೆನ್ಸ್’, ‘ವೆಲ್ಲಯನೈ’, ‘ತಿಟ್ಟಮಿರಾಂಡು’ ಸೇರಿದಂತೆ ಹಲವು ಚಿತ್ರಗಳನ್ನು ವಿನೋದ್ ಕುಮಾರ್ ನಿರ್ಮಿಸಿದ್ದಾರೆ. ಪ್ರಕಾಶ್ ರಾಜ್ ಕೊನೆಯದಾಗಿ ಕೊರಟಾಲ ಶಿವ ಅವರ 'ದೇವರ: ಭಾಗ 1' ನಲ್ಲಿ ಜೂನಿಯರ್ ಎನ್ಟಿಆರ್, ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಜತೆಗೆ ಸಿಂಗಪ್ಪ ಆಗಿ ಕಾಣಿಸಿಕೊಂಡಿದ್ದರು. (ಏಜೆನ್ಸೀಸ್)