ಕಳ್ಳತನ ಪ್ರಕರಣ ತಡೆಯಲು ಸಿಸಿ ಕ್ಯಾಮರಾ ಅಳವಡಿಕೆ; ಪ್ರಕಾಶ ಕೋಳಿವಾಡ

31-RNR-03 PRAKASHA KOLIWADA
Published on

ರಾಣೆಬೆನ್ನೂರ: ನಗರದಲ್ಲಿ ಬೈಕ್ ಕಳ್ಳತನ ಸೇರಿ ಇತರ ಕಳ್ಳತನ ಪ್ರಕರಣ ತಡೆಯುವ ದೃಷ್ಟಿಯಿಂದ ಆಯ್ದ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಕಾರಣ ಆರೋಪಗಳ ಪತ್ತೆಗೆ ಸಿಸಿ ಕ್ಯಾಮರಾಗಳ ಅವಶ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ನಗರದೊಳಗೆ ಬರುವ ಹಾಗೂ ಹೊರ ಹೋಗುವ ವಾಹನಗಳ ಮೇಲೆ ನಿಗಾ ಇಡಲು ಸೇರಿ ಇತರ ಆಯ್ದ ಸ್ಥಳದಲ್ಲಿ ಶೀಘ್ರದಲ್ಲಿಯೆ ಸಿಸಿ ಕ್ಯಾಮರಾ ಅಳವಡಿಸಲಾಗುವುದು.
ಜತೆಗೆ ನಗರದ ಎಂ.ಜಿ. ರಸ್ತೆ, ಹಳೆ ಪಿ.ಬಿ. ರಸ್ತೆ, ನೆಹರು ಮಾರುಕಟ್ಟೆ ಸೇರಿ ಇತರ ಸ್ಥಳದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿದ್ದು, ಅದಕ್ಕಾಗಿ ಸರಿಯಾಗಿ ಮಾರ್ಗಸೂಚಿ ಹಾಕಿ ಬೈಕ್, ಕಾರು ಪಾರ್ಕಿಂಗ್‌ಗಾಗಿ ವ್ಯವಸ್ಥೆ ಕಲ್ಪಿಸಲಾಗುವುದು. ನಗರದಲ್ಲಿ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೇನಾಯ್ಕರ, ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಶೇರುಖಾನ ಖಾಬೂಲಿ, ಅಮಿತ ಕಂಬಳಿ, ಬಸವರಾಜ ಹುಚ್ಚಗೊಂಡರ, ಬಸವರಾಜ ಕಂಬಳಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net