95 ನಿಮಿಷಗಳ ಥ್ರಿಲ್ಲಿಂಗ್ ತನಿಖೆ: ಸುಂದರ್ ಎಸ್. ನಿರ್ದೇಶನದ ಕ್ರೈಮ್ ಡ್ರಾಮಾ ನಾಳೆ ಬಿಡುಗಡೆ

sundar 1
Published on

ಬೆಂಗಳೂರು: ಸಾಮಾನ್ಯವಾಗಿ ಒಂದು ಸಿನಿಮಾ ಎಂದರೆ ಎರಡೂವರೆಯಿಂದ ಮೂರು ತಾಸುಗಳ ಅವಧಿ ಇರುವುದು ಸದ್ಯದ ಅಲಿಖಿತ ನಿಯಮವಾಗಿದೆ. ಈ ಮಧ್ಯೆ, ಕೇವಲ 95 ನಿಮಿಷಗಳಲ್ಲಿಯೇ ಇಡೀ ಕಥೆ ಹೇಳಿ ಮುಗಿಸಬಹುದು ಎಂಬುದನ್ನು ನಿರೂಪಿಸಲು ಹೊರಟಿದೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರತಂಡ. ನಿರ್ದೇಶಕ ಸುಂದರ್ ಎಸ್.ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ಈ ಕ್ರೈಂ ಜಾನರ್ ಚಿತ್ರ ನಾಳೆ ಬಿಡುಗಡೆಯಾಗಲಿದೆ. ಚಿತ್ರದ ಅವಧಿ ಹಾಗೂ ಟ್ರೇಲರ್ ಮೂಲಕ ಕುತೂಹಲ ಮೂಡಿಸಿದ್ದು, ಈ ಬಗ್ಗೆ ಸುಂದರ್, ‘ಇದೊಂದು ಗಂಭೀರ ಕಥೆಯಾಗಿದ್ದು, ಯಾವುದೇ ಡ್ರಾಮಾ ಸೃಷ್ಟಿಸಲು ಹೋಗಿಲ್ಲ. ಸಿದ್ಧಸೂತ್ರಗಳಿಗೆ ಅಂಟಿಕೊಳ್ಳದೆ ಇರುವ ಕಥೆಯನ್ನೇ ನೇರವಾಗಿ ಹೇಳಿದ್ದೇವೆ. ಹಾಸ್ಯ, ಡಾನ್ಸ್, ಡ್ಯುಯೆಟ್ ಯಾವುದನ್ನು ಈ ಕಥೆ ಕೇಳುವುದಿಲ್ಲ. ಹಾಗಾಗಿ ಈ ಕಥೆಯನ್ನು ಕೇವಲ 95 ನಿಮಿಷಗಳಲ್ಲಿ ಹೇಳಿ ಮುಗಿಸಿದ್ದೇವೆ. ಈ ಕಥೆಗೆ ಇಷ್ಟೇ ಅವಧಿ ಸಾಕು ಎನಿಸಿತು’ ಎಂದು ಮಾಹಿತಿ ನೀಡುತ್ತಾರೆ.

ಗಂಭೀರ ಪ್ರಕರಣದ ಸುತ್ತ: ಚಿತ್ರದ ಕಥೆಯ ಕುರಿತಂತೆ ಸುಂದರ್, ‘ಇಂದಿನ ಯುವಜನತೆ ಡ್ರಗ್ಸ್, ಗಾಂಜಾ ಸೇವನೆಯಿಂದ ಹಾಳಾಗುತ್ತಿದ್ದಾರೆ. ಇದರಿಂದ ಬಹುತೇಕ ಕುಟುಂಬಗಳು ಬೀದಿಪಾಲಾಗಿರುವುದನ್ನು ಕಣ್ಣಾರೆ ಕಂಡಿದ್ದೇವೆ. ಇದನ್ನೇ ಎಳೆಯನ್ನಾಗಿ ಇಟ್ಟುಕೊಂಡು ಕಥೆ ಮಾಡಿದ್ದೇವೆ. ಒಂದು ಪೊಲೀಸ್ ಠಾಣೆಗೆ ಹೊಸ ಪೊಲೀಸ್ ಅಧಿಕಾರಿ ಬರುತ್ತಾರೆ. ಠಾಣೆ ವ್ಯಾಪ್ತಿಯಲ್ಲಿ ಸಾಕಷ್ಟು ಕೊಲೆಗಳಾಗುತ್ತಿರುತ್ತವೆ. ಆಗ ಪೊಲೀಸ್ ಅಧಿಕಾರಿ ತನಿಖೆ ಅರಂಭಿಸಿದಾಗ ಬೇರೆ ಬೇರೆ ವಿಚಾರಗಳು ಗಮನಕ್ಕೆ ಬರುತ್ತವೆ. ಈ ಪ್ರಕರಣವನ್ನು ಯಾವ ರೀತಿಯಲ್ಲಿ ಭೇದಿಸುತ್ತಾರೆ ಎಂಬುದೇ ಕಥೆ. ರಂಗಭೂಮಿ ಕಲಾವಿದರಾದ ಮಹಿನ್ ಕುಬೇರ್, ಮುತ್ತುರಾಜ್, ರಾಜ್ ಗಗನ್, ಚಿಂತನ್ ಕಂಬಣ್ಣ ಕಲಾಬಳಗದಲ್ಲಿದ್ದಾರೆ’ ಎನ್ನುತ್ತಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net