ಪ್ರಜ್ವಲ್ ಪ್ರಕರಣ; ರಾಜೀನಾಮೆಗೆ ಮುಂದಾದ ದೇವೇಗೌಡ?

DEVEGOUDA
Published on

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಬೇಸತ್ತು ದೇವೇಗೌಡರು ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು!

ಹೌದು, ಇದನ್ನು ಖುದ್ದು ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಾರೋ ಮಾಡಿದ ತಪ್ಪಿಗೆ ನೀವೇಕೆ ರಾಜೀನಾಮೆ ಕೊಡುತ್ತೀರಿ ಎಂದು ನಾನೇ ತಡೆ ಹಾಕಿದೆ. ಪ್ರಜ್ವಲ್‌ನನ್ನು ರಕ್ಷಣೆ ಮಾಡುವ ಯಾವ ಉದ್ದೇಶವೂ ನನ್ನಲ್ಲಿಲ್ಲ. ತಂದೆ-ತಾಯಿ ಈ ಪ್ರಕರಣದಿಂದ ನೋವಿನಲ್ಲಿದ್ದಾರೆ. ಅವರಿಗೆ ಧೈರ್ಯ ಸ್ಥೈರ್ಯ ತುಂಬಲು ಪದ್ಮನಾಭ ನಗರಕ್ಕೆ ಹೋಗುತ್ತಿದ್ದೇನೆಯೇ ಹೊರತು ಪ್ರಜ್ವಲ್ ರಕ್ಷಿಸುವ ಕುರಿತು ಚರ್ಚಿಸಲು ಅಲ್ಲ. ಪ್ರಜ್ವಲ್ ವಾಪಸ್ ಕರೆಸಲು ನಾನೂ ಪ್ರಯತ್ನ ಪಡುತ್ತಿದ್ದೇನೆ ಎಂದರು.

ಎಸ್‌ಐಟಿ ಎದುರು ಹಾಜರಾಗಲು ಪ್ರಜ್ವಲ್ ಪರ ವಕೀಲರು ಒಂದು ವಾರ ಸಮಯ ಕೇಳಿದ್ದರು. ಎಸ್‌ಐಟಿ ಅವಕಾಶ ಕೊಬೇಕಿತ್ತು ಎಂದು ಹೇಳಿದರು.

48 ಗಂಟೆ ಒಳಗೆ ಹಾಜರಾಗಲಿ:

ಪ್ರಜ್ವಲ್ ರೇವಣ್ಣ 48 ಗಂಟೆ ಒಳಗೆ ಎಸ್‌ಐಟಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಇದೊಂದು ಅಸಹ್ಯ ಪ್ರಕರಣ. ತಪ್ಪು ಮಾಡಿದ್ದು ಯಾರೇ ಆಗಲಿ ಶಿಕ್ಷೆ ಅನುಭವಿಸಬೇಕು. ಈ ಪ್ರಕರಣದಿಂದ ದೇವೇಗೌಡರು ತೀವ್ರ ನೋವು ಅನುಭವಿಸುತ್ತಿದ್ದಾರೆ. ಪ್ರಜ್ವಲ್ ವಾಪಸ್ಸಾಗಿ ತನಿಖೆಗೆ ಸಹಕಾರ ನೀಡಲು ಮನವಿ ಮಾಡುವಂತೆ ನಾನು ದೇವೇಗೌಡರ ಬಳಿಯೂ ಕೇಳಿಕೊಂಡಿದ್ದೇನೆ.

ರೆಡ್ ಕಾರ್ನರ್ ನೋಟಿಸ್ ಜಾರಿಯಾಗುವವರೆಗೆ ಕಾಯಬಾರದು. ಕಳ್ಳ-ಪೊಲೀಸ್ ಆಟ ಎಷ್ಟು ದಿನ ನಡೆಯುತ್ತದೆ. ತಕ್ಷಣ ವಿದೇಶದಿಂದ ವಾಪಸ್ ಆಗಿ ಎಸ್ ಐಟಿ ಎದುರು ಹೋಗಲಿ. ಈ ಬಗ್ಗೆ ರೇವಣ್ಣ ಅವರ ಜತೆಯೂ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

ಯಾರೋ ಮಾಡಿದ ತಪ್ಪಿಗೆ ಇಡೀ ಕುಟುಂಬವನ್ನು ಸರ್ವನಾಶ ಮಾಡುವುದು ಎಷ್ಟು ಸರಿ? ಈ ವಿಷಯ ಮುಂಚಿತವಾಗಿಯೇ ತಮಗೆ ಗೊತ್ತಿದ್ದರೆ ವಿದೇಶಕ್ಕೆ ಹೋಗಲಿ ಬಿಡುತ್ತಿರಲಿಲ್ಲ. ವಕೀಲರ ಸಲಹೆ ಮೇರೆಗೆ ಏನೇನೋ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಬೇಸರ ಹೊರ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net