

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಅಧಿಕಾರಿಗಳು ಸೋಮವಾರ ಇಬ್ಬರು ಸಂತ್ರಸ್ತೆ ಮಹಿಳೆಯರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಹೊಳೇನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಕಡತಗಳನ್ನು ಈಗಾಗಲೇ ಎಸ್‌ಐಟಿಗೆ ಹಸ್ತಾಂತರವಾಗಿದ್ದು, ಈ ಬೆನ್ನಲ್ಲೇ ಸೋಮವಾರವೇ ದೂರುದಾರೇ ಸೇರಿ ಇಬ್ಬರು ಸಂತ್ರಸ್ತೆಯರನ್ನು ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಕರೆಸಿಕೊಂಡು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತೆಯರನ್ನು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ಅವರು ವಿಚಾರಣೆ ನಡೆಸಿದ್ದಾರೆ.
ಜೀವ ಬೆದರಿಕೆ ಇತ್ತು:
ಪ್ರಕರಣದ ಆರೋಪಿಗಳಾದ ಮಾಜಿ ಸಚಿವ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರಿಗೂ ನಿಮಗೂ ಎಷ್ಟು ವರ್ಷಗಳಿಂದ ಪರಿಚಯ? ೨೦೧೯ರಿಂದ ೨೦೨೨ರವರೆಗೆ ದೌರ್ಜನ್ಯ ನಡೆದಿದೆ ಎಂದು ದೂರು ನೀಡಿದ್ದೀರಿ? ಇದುವರೆಗೂ ನೀವು ಏಕೆ ದೂರು ನೀಡಿಲ್ಲ. ನಿಮಗೆ ಯಾರಾದಿಂದಾರೂ ಪ್ರಾಣ ಬೆದರಿಕೆ ಇತ್ತೇ? ಯಾವ ರೀತಿ ಆಮಿಷವೊಡ್ಡಿ ಅಥವಾ ಬೆದರಿಕೆಯೊಡ್ಡಿ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ? ಸೇರಿ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಸಂತ್ರಸ್ತೆಯರು ಉತ್ತರಿಸಿ, ತಮ್ಮ ಮೇಲಿನ ದೌರ್ಜನ್ಯವನ್ನು ಈ ಹಿಂದೆಯೂ ಹಲವು ಬಾರಿ ದೂರು ನೀಡುವ ಪ್ರಯತ್ನ ಮಾಡಿದ್ದೇವು. ಆಗ ತಮ್ಮ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿತ್ತು. ಹೀಗಾಗಿ ದೂರು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. ಮಧ್ಯಾಹ್ನ ೨ ಗಂಟೆಯಿಂದ ರಾತ್ರಿ ೭ ಗಂಟೆವರೆಗೆ ಸಂತ್ರಸ್ತೆಯರ ವಿಚಾರಣೆ ನಡೆಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಆರೋಪಿ ಮುಖ ಚಹರೆ ಪತ್ತೆಯಾಗಿಲ್ಲ:
ಅಶ್ಲೀಲ ವಿಡಿಯೋ ಸಂಬಂಧ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪ್ರಭಾವತಿ ಸೇರಿ ಮೂವರು ಮಹಿಳಾ ಡಿವೈಎಸ್ಪಿ, ಮೂವರು ಇನ್‌ಸ್ಪೆಕ್ಟರ್, ನಾಲ್ವರು ಪಿಎಸ್‌ಐ, ಸಿಐಡಿ ಸೈಬರ್ ತಂಡ ಸೇರಿ ೨೫ಕ್ಕೂ ಹೆಚ್ಚು ಅಧಿಕಾರಿ-ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಆಗಿವೆ. ಅವುಗಳ ಸತ್ಯಾಸತ್ಯತೆ ತಿಳಿಯಲು ಸೈಬರ್ ತಂಡದ ಅಧಿಕಾರಿಗಳನ್ನು ಪಡೆಯಲಾಗಿದೆ. ಅದರಲ್ಲಿ ಆರೋಪಿ ಪ್ರಜ್ವಲ್ ರೇವಣ್ಣನ ಮುಖ ಚಹರೆ ಪತ್ತೆಯಾಗಿಲ್ಲ. ಆತನ ಧ್ವನಿ ಆಧರಿಸಿ ಆತನೇ ವಿಡಿಯೋದಲ್ಲಿರುವ ವ್ಯಕ್ತಿ ಎಂದು ಖಚಿತ ಪಡಿಸಿಕೊಳ್ಳಬೇಕಿದೆ. ಹೀಗಾಗಿ ಕೆಲ ತಜ್ಞರನ್ನು ನೇಮಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.