ಜೂ.18 ರವರೆಗೆ ಎಸ್‌ಐಟಿ ವಶಕ್ಕೆ ಪ್ರಜ್ವಲ್ ರೇವಣ್ಣ

prajwal
Published on

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಸೈಬರ್ ಕ್ರೈಮ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಜೂನ್ 18 ರವರೆಗೆ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ವಶಕ್ಕೆ ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಆತನನ್ನು ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಅಧಿಕಾರಿಗಳು ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿದ ನಗರದ ೪೨ನೇ ಎಸಿಎಂಎಂ ಕೋರ್ಟ್, ಬಾಡಿ ವಾರಂಟ್ ಜಾರಿಗೊಳಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪ್ರಜ್ವಲ್:
ಪ್ರಜ್ವಲ್ ರೇವಣ್ಣಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಪ್ರಜ್ವಲ್ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿದ್ದು, ವಿಚಾರಣಾಧೀನ ಖೈದಿ ಸಂಖ್ಯೆ ೫೬೬೪ ನೀಡಲಾಗಿತ್ತು. ಬಳಿಕ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಕ್ವಾರೆಂಟೈನ್ ಸೆಲ್ನಲ್ಲಿದ್ದರು.
ಅತ್ಯಾಚಾರ ಆರೋಪ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ಎಸ್‌ಐಟಿ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಜೂ.೧೦ ರಂದು ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಪ್ರಜ್ವಲ್ ರೇವಣ್ಣ ಅವರಿಗೆ ೧೪ ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದೀಗ ಮತ್ತೆ ಕೋರ್ಟ್‌ಗೆ ಹಾಜರುಪಡಿಸಿ ಪುನಃ ಎಸ್‌ಐಟಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net