"ಸನ್ ಆಫ್ ಮುತ್ತಣ್ಣ' ಬಳಿಕ ಪ್ರಣಮ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ 'ಶ್ರೀರಸ್ತು'. ಇದೀಗ ಪ್ರಣಮ್ ಅಣ್ಣ ಪ್ರಜ್ವಲ್ ದೇವರಾಜ್ ಕೂಡ ಚಿತ್ರತಂಡ ಸೇರಿಕೊಂಡಿದ್ದು, ಚಿತ್ರತಂಡಕ್ಕೆ ಮತ್ತಷ್ಟು ಬಲ ತುಂಬಿದಂತಾಗಿದೆ. ಪ್ರಜ್ವಲ್ ಹುಟ್ಟುಹಬ್ಬದಂದೇ ಶ್ರೀರಸ್ತು ತಂಡ ಈ ಬಗ್ಗೆ ಘೋಷಣೆ ಮಾಡಿದ್ದು, ಅಣ್ಣ-ತಮ್ಮ ಜತೆಯಾಗಿ ನಟಿಸುತ್ತಿರುವ ಶೂಟಿಂಗ್ ಸ್ಟಿಲ್ಗಳನ್ನು ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ಮತ್ತು ಪ್ರಣಮ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದು, ಶ್ರೀರಸ್ತು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಚಿತ್ರಕ್ಕೆ ಶಂಕರ್ ರೆಡ್ಡಿ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಇತ್ತೀಚೆಗಷ್ಟೆ ಪ್ರಜ್ವಲ್ ಮತ್ತು ಪ್ರಣಮ್ ಭಾಗದ ಶೂಟಿಂಗ್ ನಡೆಸಿದ್ದಾರೆ. ಚಿತ್ರದಲ್ಲಿ ಪ್ರಣಮ್ಗೆ ಬ್ಯಾಂಗಲ್ ಬಂಗಾರಿ ಸಂಜನಾ ಆನಂದ್ ನಾಯಕಿಯಾಗಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಮೂಡಿಬರುತ್ತಿದೆ. ಪ್ರಜ್ವಲ್, ಪ್ರಣಮ್, ಸಂಜನಾ ಜತೆ ಸುಮನ್, ಆಮನಿ, ಚೈತ್ರಾ ರೈ, ರವಿ ಶಿವತೇಜ, ಜೋಶ್ ರವಿ, ರವಿಪ್ರಕಾಶ್ ಸೇರಿ ಕೆಲ ತೆಲುಗು ಕಲಾವಿದರು ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀರಸ್ತು ಕೌಟುಂಬಿಕ ಕಥೆ ಹೊಂದಿರುವ ಪ್ರೇಮಕಥೆಯಾಗಿದ್ದು, ಇದೇ ವರ್ಷ ತೆರೆಗೆ ಬರಲಿದೆ.