ಪ್ರಜ್ವಲ್ ಪ್ರಕರಣ, ಜೆಡಿಎಸ್ ತಲ್ಲಣ

JDS LOGO
Published on

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪ್ರಕರಣ ಜೆಡಿಎಸ್‌ನ್ನು ತಲ್ಲಣಗೊಳಿಸಿದೆ.

ಪ್ರಕರಣವನ್ನು ಮುಚ್ಚಿ ಹಾಕಲು ಸಂತ್ರಸ್ಥೆಯನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿದ್ದು, ಜೆಡಿಎಸ್‌ನ ಝಂಗಾಬಲವನ್ನೇ ಅಲ್ಲಾಡಿಸಿದೆ. ಪಕ್ಷದಲ್ಲಿ ತಳಮಳ, ಕಳವಳ, ಪರಿತಾಪ ಎದ್ದು ಕಾಣುತ್ತಿದೆ. ಪಕ್ಷದ ಅಸ್ಥಿತ್ವಕ್ಕೇ ಈ ಪ್ರಕರಣ ಕೊಡಲಿ ಏಟು ಕೊಟ್ಟಿದೆ.

2023ರ ವಿಧಾನಸಭೆ ಚುನಾವಣೆ ಬಳಿಕ ನೆಲ ಕಚ್ಚಿದ್ದ ಜೆಡಿಎಸ್ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು. ಲೋಕಸಭೆ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಪಡೆದುಕೊಂಡು ಭರ್ಜರಿ ಚುನಾವಣಾ ರಣಕಹಳೆ ಮೊಳಗಿಸಿತ್ತು.

ಮೊದಲ ಹಂತದ ಚುನಾವಣೆ ಮುಗಿದ ತಕ್ಷಣ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದ ಲೈಂಗಿಕ ದೌರ್ಜನ್ಯ ಇಡೀ ಪಕ್ಷದ ಬಲವನ್ನೇ ನಜ್ಜುಗುಜ್ಜು ಮಾಡಿತು. ಕಾಂಗ್ರೆಸ್ ಮಣಿಸಲು ತೊಡೆತಟ್ಟಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕನಸಿಗೇ ಕಲ್ಲು ಹಾಕಿತು.

ಡ್ಯಾಮೇಜ್ ಕಂಟ್ರೋಲ್‌ಗೆ ಕುಮಾರಸ್ವಾಮಿ ನಾನಾ ಪದ ಪ್ರಯೋಗಗಳ ಮೂಲಕ ಶತಾಯಗತಾಯ ಪ್ರಯತ್ನ ಪಟ್ಟರೂ ಕಾಂಗ್ರೆಸ್ ಈ ಪ್ರಕರಣವನ್ನು ಹಿಂಜಿ ಹಿಂಡೆ ಹಿಪ್ಪೆ ಮಾಡಿತು.

ಹೋದಲ್ಲಿ ಬಂದಲ್ಲಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಭೂತ ಜೆಡಿಎಸ್ ಬೆನ್ನುಬಿತ್ತು. ರಾಜ್ಯಾದ್ಯಂತ ಕಾಂಗ್ರೆಸ್ ಹಾಗೂ ಮಹಿಳಾ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಪಕ್ಷದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ನಡೆಸಿದವು. ಸಾಮಾಜಿಕ ಜಾಲತಾಣದಲ್ಲಂತೂ ದೊಡ್ಡ ಮಟ್ಟದಲ್ಲಿ ಜೆಡಿಎಸ್‌ನ್ನು ಅಪಹಾಸ್ಯಕ್ಕೀಡು ಮಾಡಲಾಯಿತು.

ಬಿಜೆಪಿ ವಿರುದ್ಧದ ಪ್ರಚಾರಕ್ಕೂ ಕಾಂಗ್ರೆಸ್ ಈ ಪ್ರಕರಣವನ್ನು ಅಸವಾಗಿಸಿಕೊಂಡಿತು. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಪ್ರಶ್ನಿಸಿ ಮೈತ್ರಿ ಕೂಟಕ್ಕೇ ಮುಜುಗರ ಉಂಟು ಮಾಡಿತು.

ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳುವ ಸವಾಲು

ಸಿದ್ದರಾಮಯ್ಯ ಜೆಡಿಎಸ್ ಬಿಟ್ಟ ಬಳಿಕ ಕುರುಬ ಸಮುದಾಯದ ಮತಗಳು ಜೆಡಿಎಸ್‌ನಿಂದ ಬಹುತೇಕ ದೂರ ಸರಿದಿದ್ದವು. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಜೆಡಿಎಸ್‌ಗೆ ಕೈಕೊಟ್ಟಿವೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬಳಿಕವಂತೂ ಮುಸ್ಲಿಂರು ಜೆಡಿಎಸ್ ವಿರುದ್ಧ ಬಹಿರಂಗವಾಗಿಯೇ ತಿರುಗಿ ಬಿದ್ದಿದ್ದಾರೆ. ಈಗ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಮಹಿಳಾ ಮತಗಳು ಕೂಡ ಕೈಕೊಡಬಹುದಾದ ಆತಂಕ ಜೆಡಿಎಸ್‌ನ್ನು ಕಾಡುತ್ತಿದೆ.

ಮೈತ್ರಿ ಮುಂದುವರಿಕೆಯೂ ಅನುಮಾನ

‘ಮಹಿಳೆಯರ ಮೇಲೆ ದೌರ್ಜನ್ಯ ಎಸಗುವರ ಜತೆ ಬಿಜೆಪಿ ಇರಲು ಸಾಧ್ಯವಿಲ್ಲ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಜೆಡಿಎಸ್‌ನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದೆಡೆ ಮೈತ್ರಿ ಉಳಿಸಿಕೊಳ್ಳುವ ಕಸರತ್ತು ಹಾಗೂ ಪಕ್ಷದ ಶಾಸಕರು, ಕಾರ್ಯಕರ್ತರನ್ನು ಕಾಪಿಟ್ಟುಕೊಳ್ಳಬೇಕಿದೆ. ಕೆಲ ಶಾಸಕರು ಈ ಪ್ರಕರಣ ತಮ್ಮ ರಾಜಕೀಯ ಭವಿಷ್ಯಕ್ಕೆ ಮುಳುವಾಗಬಹುದೆಂಬ ಆತಂಕದಲ್ಲಿದ್ದಾರೆ. ಈ ಎಲ್ಲ ಸವಾಲನ್ನು ಎದುರಿಸಬೇಕಾದ ಹೊಣೆಗಾರಿಕೆ ಈಗ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಹೆಗಲ ಮೇಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net