ಯುಪಿಎಸ್​ಸಿ ಪರೀಕ್ಷೆ-2019 ಫಲಿತಾಂಶ ಪ್ರಕಟ: ಪ್ರದೀಪ್​ ಸಿಂಗ್​ ಟಾಪರ್​

Pradeep Singh
Published on

ನವದೆಹಲಿ: 2019ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಪರೀಕ್ಷಾ ಫಲಿತಾಂಶ ಮಂಗಳವಾರ ಮಧ್ಯಾಹ್ನ ಪ್ರಕಟವಾಗಿದ್ದು, ಪುರುಷ ಅಭ್ಯರ್ಥಿಗಳಲ್ಲಿ ಪ್ರದೀಪ್​ ಸಿಂಗ್ ಹಾಗೂ ಮಹಿಳಾ ಅಭ್ಯರ್ಥಿಗಳಲ್ಲಿ ಪ್ರತಿಭಾ ವರ್ಮಾ ಟಾಪರ್ಸ್​ಗಳಾಗಿ ಹೊರಹೊಮ್ಮಿದ್ದಾರೆ.

ವಿವಿಧ ನಾಗರಿಕ ಸೇವೆಗಳಿಗೆ ಒಟ್ಟು 829 ಅಭ್ಯರ್ಥಿಗಳು 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಅಂತಿಮ ಫಲಿತಾಂಶವನ್ನು ಯುಪಿಎಸ್​ಸಿ ಅಧಿಕೃತ ವೆಬ್​ಸೈಟ್​ನಲ್ಲಿ ನೋಡಬಹುದಾಗಿದೆ.

ಕಳೆದ ಸೆಪ್ಟೆಂಬರ್​ನಲ್ಲಿ ನಡೆದ ಲಿಖಿತ ಪರೀಕ್ಷೆ ಮತ್ತು 2020ರ ಫೆಬ್ರವರಿ-ಆಗಸ್ಟ್​ನಲ್ಲಿ ನಡೆದ ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಆಧಾರದ ಮೇಲೆ ಇಂದು ಅಂತಿಮ ಫಲಿತಾಂವನ್ನು ಪ್ರಕಟಿಸಲಾಗಿದೆ.

ಒಟ್ಟಾರೆ ಅಭ್ಯರ್ಥಿಗಳಲ್ಲಿ 2019ರಲ್ಲಿ ಮೊದಲ ಬಾರಿಗೆ ಅನುಷ್ಠಾನಕ್ಕೆ ತರಲಾದ ಇವಿಎಸ್​ (ಆರ್ಥಿಕ ದುರ್ಬಲ ವರ್ಗ) ಕೋಟಾ ಅಡಿಯಲ್ಲಿ 78 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 11 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಪ್ರಸಕ್ತ 2020ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆ ಮೇ 31ರಂದು ನಡೆಯಬೇಕಿತ್ತು. ಆದರೆ, ಕರೊನಾ ವೈರಸ್​ ಬಿಕ್ಕಟ್ಟಿನಿಂದಾಗಿ ಅಕ್ಟೋಬರ್​ 4ಕ್ಕೆ ವೇಳಾಪಟ್ಟಿ ಮರುನಿಗದಿಪಡಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net