

ಶಿವಮೊಗ್ಗ: ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುವ ವೇದಿಕೆಗಳನ್ನು ಸೃಷ್ಟಿಸಬೇಕು ಎಂದು ಹಿರಿಯ ಪತ್ರಕರ್ತ ನಾಗರಾಜ್ ನೇರಿಗೆ ಹೇಳಿದರು.
ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಪತ್ರಿಕೋದ್ಯಮ ವಿಭಾಗದ ಸಂವಹನ ಸಂವಾದ ವೇದಿಕೆಯ ಅರಳು ಇ-ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಬರವಣಿಗೆಯನ್ನು ಕಾಲೇಜಿನಲ್ಲಿಯೆ ಆರಂಭಿಸಲು ಪಾಕ್ಷಿಕಗಳನ್ನು ಹೊರತರಬೇಕು. ಪತ್ರಿಕೋದ್ಯಮ ಅತ್ಯಂತ ಜವಾಬ್ದಾರಿಯುತ ಕ್ಷೇತ್ರವಾಗಿದ್ದು ಸರಿಯಾದ ತಯಾರಿ ಇಲ್ಲದೆ ಇಲ್ಲಿ ಯಶಸ್ಸು ಕಾಣಲಾಗದು ಎಂದರು.
ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ನಮ್ಮ ಕಲಿಕೆಯೂ ಇರಬೇಕು. ಈ ಕ್ಷೇತ್ರದಲ್ಲಿ ಇರುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ವಿದ್ಯಾರ್ಥಿಗಳು ಅರಿತಿರಬೇಕು. ಇತ್ತೀಚಿಗೆ ವಿದ್ಯಾರ್ಥಿಗಳಲ್ಲಿ ಭಾಷಾ ಜ್ಞಾನದ ಕೊರತೆಯಿದೆ. ಅಧ್ಯಯನ ಶೀಲ ವಿದ್ಯಾರ್ಥಿಗಳಿಂದ ಹೊಸತನ್ನು ನಿರೀಕ್ಷಿಸಬಹುದು ಎಂದು ಹೇಳಿದರು.
ಹಿರಿಯ ಪತ್ರಕರ್ತ ಸಂತೋಷ್ ಕಾಚಿನಕಟ್ಟೆ ಮಾತನಾಡಿ, ಮಾಧ್ಯಮ ಕ್ಷೇತ್ರ ಉದ್ಯಮವಾಗಿದೆ. ಬರವಣಿಗೆ ಮಾತ್ರವಲ್ಲದೆ ಮಾರ್ಕೇಟಿಂಗ್ ತಿಳಿವಳಿಕೆಯೂ ಇಂದು ಅಗತ್ಯವಾಗಿ ಬೇಕಿದೆ. ಓದುಗರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬರವಣಿಗೆ ಇರಬೇಕು. ಸಾಮಾಜಿಕ ಬದ್ಧತೆಯೂ ಇರಬೇಕು ಎಂದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕಿ ಡಾ. ವಿದ್ಯಾ ಮೇರಿ ಜೋಸೆಫ್ ಮಾತನಾಡಿ, ವಿದ್ಯಾರ್ಥಿಗಳು ಮಾತೃಭಾಷೆಯನ್ನೇ ಸರಿಯಾಗಿ ಬರೆಯಬೇಕು. ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿದ್ದು ಪ್ರತಿಭೆಯಿಂದ ಮಾತ್ರ ಎಲ್ಲವನ್ನೂ ಗಳಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಪತ್ರಿಕೆಗಳನ್ನು ನಿರಂತರ ಓದಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ. ಜಿ.ಬಿ.ಚನ್ನಪ್ಪ ಮಾತನಾಡಿ, ಪತ್ರಿಕೋದ್ಯಮ ವಿಭಾಗದಲ್ಲಿ ಹಿರಿಯ ಪತ್ರಕರ್ತರ ಅನುಭವಗಳನ್ನು ಮಕ್ಕಳಿಗೆ ತಿಳಿಸಬೇಕು. ಶಿವಮೊಗ್ಗ ಜಿಲ್ಲೆ ಪತ್ರಿಕಾ ಕ್ಷೇತ್ರದಲ್ಲಿಯೂ ಒಳ್ಳೆಯ ಹೆಸರು ಪಡೆದಿದ್ದು ಲಂಕೇಶ್ ಅಂತಹವರು ನಮಗೆ ಮಾದರಿಯಾಗಬೇಕು ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಅಣ್ಣಪ್ಪ ಮಳೀಮಠ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪತ್ರಕರ್ತರಿಂದ ನಿರಂತರ ಮಾರ್ಗದರ್ಶನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಪತ್ರಿಕೋದ್ಯಮ ಪ್ರಾಧ್ಯಾಪಕಿ ಕೆ.ಎಚ್.ಸ್ವಾತಿ ಪ್ರಾಸ್ತಾವಿಕವಾಗಿ ಮಾತನಾಡಿದರು.