ಟಾಲಿವುಡ್ ಖ್ಯಾತ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಫೌಜಿ’ ಚಿತ್ರದ ಅಜ್ಞಾತಪರ್ವ ಪೂರ್ಣಗೊಂಡಿದ್ದು, ತೆರೆ ಮೇಲೆ ಬರಲು ಸಿದ್ಧವಾಗಿದೆ. ಕೆಲ ತಿಂಗಳ ಹಿಂದೆಯೇ ಶೂಟಿಂಗ್ ಪೂರ್ಣಗೊಳಿಸಿದ್ದ ಚಿತ್ರತಂಡ ಇದೀಗ ಹೊಸ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅದರಂತೆ, ಇದೇ ಡಿಸೆಂಬರ್ 3ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಮೊದಲು ಫೌಜಿ’ ಆಗಸ್ಟ್ ಅಥವಾ ಸೆಪ್ಟೆಂಬರ್‌ಗೆ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಸದ್ಯ ಬ್ಯಾಕ್ ಟು ಬ್ಯಾಕ್ ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್‌ಗೆ ರೆಡಿಯಿದ್ದು, ಜತೆಗೆ ‘ಫೌಜಿ’ ಪೋಸ್ಟ್ -ಪ್ರೊಡಕ್ಷನ್ ಕಾರ್ಯ ವಿಳಂಬವಾದ ಕಾರಣ ಚಿತ್ರತಂಡ ಡಿಸೆಂಬರ್ ಮಾಸವನ್ನು ಲಾಕ್ ಮಾಡಿಕೊಂಡಿದೆ. ಇನ್ನು ರಿಲೀಸ್ ಡೇಟ್ ಅನೌನ್ಸ್ ಹಿನ್ನೆಲೆಯಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಾಶಿ ಹೆಣಗಳ ನಡುವೆ ಕಲ್ಲಿನ ಮೇಲೆ ಪ್ರಭಾಸ್ ಬಂದೂಕು ಹಿಡಿದು ಕುಳಿತಿದ್ದು, ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ‘ಬಾಹುಬಲಿ’ ಸರಣಿ ಬಳಿಕ ಪ್ರಭಾಸ್ ನಟಿಸಿರುವ ಮತ್ತೊಂದು ಪೀರಿಯಾಡಿಕ್ ಸಿನಿಮಾ ಇದಾಗಿದ್ದು, ಸ್ವಾತಂತ್ರ್ಯ ಪೂರ್ವದ ಕಥೆ ಹೊಂದಿದೆ. ಅದಕ್ಕಾಗಿ ಹೊಸ ಪೋಸ್ಟರ್‌ನಲ್ಲಿ ‘ಸೈನಿಕನೊಬ್ಬ ಒಬ್ಬಂಟಿಯಾಗಿ ಹೋರಾಡಿದ ಕಥೆ’ ಎಂದು ಅಡಿಬರಹ ನೀಡಲಾಗಿದೆ. ಜತೆಗೆ ಸಿನಿಮಾ ತೆರೆ ಮೇಲೆ ಬರುವ ಕಾರಣಕ್ಕಾಗಿ ‘ಅಜ್ಞಾತಪರ್ವ ಮುಕ್ತಾಯ’ ಎಂದು ಬರೆದುಕೊಂಡಿದೆ. ‘ಸೀತಾ ರಾಮಂ’ ಖ್ಯಾತಿಯ ಹನು ರಾಘವಪುಡಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಪ್ರಭಾಸ್ ಜತೆಗೆ ಇಮಾನ್ವಿ, ಚೈತ್ರಾ ಜೆ. ಆಚಾರ್, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಜಯಪ್ರದಾ ತಾರಾಗಣದಲ್ಲಿದ್ದಾರೆ. -ಏಜೆನ್ಸೀಸ್