

‘ಸಲಾರ್’ ಸಿನಿಮಾ ಸೆಪ್ಟಂಬರ್ 28ರಂದು ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಈ ಬೆನ್ನಲ್ಲೇ ಪ್ರಭಾಸ್ ವಿದೇಶಕ್ಕೆ ಹಾರಿದ್ದಾರೆ ಎಂದು ವರದಿ ಆಗಿದೆ. ಆದರೆ, ಯಾವುದೂ ಅಧಿಕೃತವಾಗಿಲ್ಲ.
ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಇನ್ನೂ ಹೆಚ್ಚಿನ ಸಮಯ ಬೇಕು ಎಂದು ನಿರ್ದೇಶಕ ಪ್ರಶಾಂತ್ ನೀಲ್ಗೆ ಅನಿಸಿದೆ. ಈ ಕಾರಣದಿಂದ ಅವರು ಸಿನಿಮಾ ರಿಲೀಸ್ ಪೋಸ್ಟ್ಪೋನ್ ಮಾಡಿದ್ದಾರೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಹೀಗಾಗಿ, ಪ್ರಭಾಸ್ ಬೇರೆ ದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ ಪ್ರಭಾಸ್ ಅವರು ವಿದೇಶಕ್ಕೆ ತೆರಳಿದ್ದು ಕಾಲಿನ ಸರ್ಜರಿಗೆ ಎನ್ನಲಾಗುತ್ತಿದೆ. ಕಾಲಿನ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಈ ಮೊದಲು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರು ಎರಡನೇ ಬಾರಿಗೆ ಅವರು ಸರ್ಜರಿ ಮಾಡಿಸಿಕೊಳ್ಳಬೇಕಿದೆ. ಇನ್ನೂ ಕೆಲವು ವರದಿಗಳು ಹೇಳೋದೇ ಬೇರೆ.
‘ಆದಿಪುರುಷ್’ ರಿಲೀಸ್ ಬಳಿಕ ಅವರು ಒಂದಷ್ಟು ಸಮಯ ವಿದೇಶದಲ್ಲಿ ಕಳೆದು ಬಂದಿದ್ದರು. ಆ ಬಳಿಕ ಅವರು ನಿರಂತರವಾಗಿ ‘ಕಲ್ಕಿ 2898 ಎಡಿ’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಆದರು. ಅವರಿಗೆ ಒಂದು ಬ್ರೇಕ್ ಬೇಕಿದೆ. ಹೀಗಾಗಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ಸಲಾರ್ ಚಿತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಮೂಲಕ ವಿಜಯ್ ಕಿರಗಂದೂರು ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.