

ಹೈದರಾಬಾದ್: ಜಾಗತಿಕವಾಗಿ ಜೂ. 27ರಂದು ಬಹುತೇಕ ಚಿತ್ರಮಂದಿಗಳಲ್ಲಿ ಬಿಡುಗಡೆಗೊಂಡ ಟಾಲಿವುಡ್ ರೆಬೆಲ್ ಸ್ಟಾರ್, ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಚಿತ್ರ ಇದೀಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಮೊದಲ ದಿನವೇ ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ಇದೀಗ ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ರೂ. ಕ್ಲಬ್ ಸೇರುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬ್ಲಾಕ್ಬಸ್ಟರ್ ಸೈನ್ಸ್-ಫಿಕ್ಷನ್ ಕಲ್ಕಿ 2898 AD ಇದೀಗ ಸಾರ್ವಕಾಲಿಕ ದಾಖಲೆ ಬರೆದಿದ್ದು, 6ನೇ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ. ಪ್ರಭಾಸ್ ಚಿತ್ರವು ಅಮಿರ್ ಖಾನ್ ನಟನೆಯ ದಂಗಲ್, ಬಾಹುಬಲಿ 2, ಆರ್ಆರ್ಆರ್, ಕೆಜಿಎಫ್ 2 ಮತ್ತು ಜವಾನ್ ಸಿನಿಮಾಗಳ ನಂತರದ ಸ್ಥಾನದಲ್ಲಿದೆ.
ಈ ಐತಿಹಾಸಿಕ ಯಶಸ್ಸಿಗೆ ಕಾರಣರಾದ ಪ್ರತಿ ಅಭಿಮಾನಿಗೂ ವಿಶೇಷವಾಗಿ ಧನ್ಯವಾದ ಅರ್ಪಿಸಿದ ಪ್ರಭಾಸ್, ಒಂದು ವಿಡಿಯೋ ಮೂಲಕ ಫ್ಯಾನ್ಸ್ಗಳ ಮನಗೆದ್ದಿದ್ದಾರೆ. “ನನ್ನ ಅಭಿಮಾನಿಗಳೇ, ನನಗೆ ಇಷ್ಟು ದೊಡ್ಡ ಹಿಟ್ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನೀವಿಲ್ಲದೆ ನಾನು ಶೂನ್ಯ. ಈ ಸಿನಿಮಾಗಾಗಿ ನಿರ್ದೇಶಕ ನಾಗ್ ಅಶ್ವಿನ್ ಐದು ವರ್ಷ ತುಂಬಾ ಕಷ್ಟಪಟ್ಟಿದ್ದಾರೆ. ಇಷ್ಟೊಂದು ಹಣವನ್ನು ಧೈರ್ಯದಿಂದ ಚಿತ್ರದ ಮೇಲೆ ಸುರಿದ ನಮ್ಮ ನಿರ್ಮಾಪಕರು ಅಶ್ವಿನಿ ದತ್ ಅವರಿಗೆ ಥ್ಯಾಂಕ್ಯೂ ಎಂದು ಹೇಳಿದರು.