ಎಳೆಯರಿಗೆ ಪೋಕ್ಸೊ ಪಾಠ

Untitled design
Published on

| ಶ್ರವಣ್​ ನೀರಬಿದಿರೆ, ಬೆಂಗಳೂರು

ಕಾನೂನು ಸೇವಾ ಪ್ರಾಧಿಕಾರದ ಈ ವರ್ಷದ ಮಹತ್ವದ ಯೋಜನೆಗಳಲ್ಲಿ ಪೋಕ್ಸೊ ಕುರಿತು ಅರಿವು ಮೂಡಿಸುವ ಕಾರ್ಯವೂ ಒಂದಾಗಿದೆ. ಕಠಿಣ ಕ್ರಮಗಳ ನಡುವೆಯೂ ತೆರೆಮರೆಯಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಪ್ರೀತಿ, ಪ್ರೇಮದ ಹಿಂದೆ ಹೋಗುತ್ತಿರುವ 13ರಿಂದ 15 ವರ್ಷದೊಳಗಿನ ಅಪ್ರಾಪ್ತ ವಯಸ್ಕರು ಪೋಕ್ಸೊ ಕಾಯ್ದೆಯಡಿ ಬಂಧಿಯಾಗುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆ, ಕಾಲೇಜು ಮತ್ತು ಹಾಸ್ಟೆಲ್​ಗಳಿಗೆ ಹೋಗಿ ಪೋಕ್ಸೊ ಕಾಯ್ದೆ ಬಗ್ಗೆ ತಿಳಿಸುವ ಕೆಲಸ ನಡೆದಿದೆ.

ವರ್ಷಪೂರ್ತಿ ಕಾನೂನು ಜಾಗೃತಿ

ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಪ್ರಯುಕ್ತ ಈ ವರ್ಷಪೂರ್ತಿ ಮಾದಕ ದ್ರವ್ಯಗಳ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಹೋರಾಟ, ಪ್ರಬಲ ಕಾನೂನುಗಳಿದ್ದರೂ ತೆರೆಮರೆಯಲ್ಲಿ ನಡೆಯುತ್ತಿರುವ ಬಾಲ್ಯವಿವಾಹ ಮತ್ತು ಆ ಸಂಬಂಧ ದಾಖಲಾಗುತ್ತಿರುವ ಪೋಕ್ಸೊ ಪ್ರಕರಣಗಳ ಬಗ್ಗೆ ಜಾಗೃತಿ, ಪ್ಲಾಸ್ಟಿಕ್ ಮಾಲಿನ್ಯ ಕಡಿಮೆ ಮಾಡಲು ಕಾರ್ಯಯೋಜನೆ ಮತ್ತು ಕೆರೆಗಳ ಸಂರಕ್ಷಣೆ ಬಗ್ಗೆ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ಧರಿಸಿದೆ.

ವ್ಯಾಜ್ಯಮುಕ್ತ ಗ್ರಾಮಕ್ಕಾಗಿ ಕಾನೂನು ಸೇವಕರು

ಸಾಮಾಜಿಕ ಕಳಕಳಿಯಿರುವ ಸಾಮಾನ್ಯ ಜನರನ್ನೇ ಅರೆಕಾಲಿಕ ಕಾನೂನು ಸೇವಕರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ. ಇವರಲ್ಲಿ ಲೈಂಗಿಕ ಕಾರ್ಯಕರ್ತರು, ತೃತೀಯ ಲಿಂಗಿಗಳು, ನಿವೃತ್ತ ನೌಕರರು ಮತ್ತು ಕಾನೂನು ವಿದ್ಯಾರ್ಥಿಗಳು ಇದ್ದು, ಸಾಮಾಜಿಕ ತಳಸ್ತರದ ಸಂಪರ್ಕ ಹೊಂದಿರುತ್ತಾರೆ. ಪ್ರಾಧಿಕಾರದ ಕಾಲಾಳುಗಳಾಗಿರುವ ಇವರು, ಗ್ರಾಮೀಣ ಪ್ರದೇಶದಲ್ಲಿ ಕಾನೂನು ಸೇವೆಗಳು ಅಗತ್ಯವಿರುವವರನ್ನು ಪ್ರಾಧಿಕಾರಕ್ಕೆ ಸಂರ್ಪಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಾರೆ. ಕಾನೂನು ವಿದ್ಯಾಲಯಗಳ ವಿದ್ಯಾರ್ಥಿಗಳ ಸೇವೆಯನ್ನೂ ಪ್ರಾಧಿಕಾರ ಪಡೆಯುತ್ತಿದೆ.

ಕಾನೂನು ಅರಿವು ಕಾರ್ಯಕ್ರಮ

ಹುಟ್ಟು ಮತ್ತು ಸಾವಿನ ದಾಖಲೀಕರಣದಂತಹ ಸಾಮಾನ್ಯ ವಿಷಯದಲ್ಲಿಯೂ ಬಹುತೇಕ ಜನರಿಗೆ ಕಾನೂನಿನ ಅರಿವಿನ ಕೊರತೆಯಿದೆ. ಪ್ರತಿ 4 ತಿಂಗಳಿಗೊಮ್ಮೆ ನಡೆಯುವ ಲೋಕ್ ಅದಾಲತ್​ನಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ 35ರಿಂದ 40 ಸಾವಿರ ಪ್ರಕರಣಗಳು ಇತ್ಯರ್ಥಗೊಳ್ಳುತ್ತವೆ. ಜನರಿಗೆ ವಾಹನ ವಿಮೆಯ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ. ಜೀವನಾಂಶದ ಹಕ್ಕಿನ ಅರಿವು ಗ್ರಾಮೀಣ ಮಹಿಳೆಯರಿಗೆ ಕಡಿಮೆಯಿದೆ. ಆದ್ದರಿಂದ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ದುರ್ಬಲರಿಗೆ ಉಚಿತ ಕಾನೂನು ಸೇವೆಗಳು

ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆಗಳನ್ನು ಈ ಮೂಲಕ ಒದಗಿಸಲಾಗುತ್ತದೆ. ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆಗೊಳಗಾದ ಸಂತ್ರಸ್ತರು, ಅಸಂಘಟಿತ ವಲಯದ ಕಾರ್ವಿುಕರು, ದೌರ್ಜನ್ಯಕ್ಕೊಳಗಾದ ಮಕ್ಕಳು, ಬುಡಕಟ್ಟು ಜನರು ಮತ್ತು ಹಿರಿಯ ನಾಗರಿಕರು ಮತ್ತು ಖೈದಿಗಳಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ಸೇವೆಗಳನ್ನು ಪಡೆಯಲು ವಾರ್ಷಿಕ 3 ಲಕ್ಷ ರೂ.ಗಿಂತಲೂ ಕಡಿಮೆ ಆದಾಯ ಹೊಂದಿರುವವರು ಅರ್ಹರು. ನಾಲ್ಸಾ ಯೋಜನೆಯ ಮೂಲಕವೂ ಕಾನೂನು ಸೇವೆಗಳನ್ನು ಅರ್ಹರಿಗೆ ಒದಗಿಸಲಾಗುತ್ತದೆ. ಅಗತ್ಯವಿರುವವರು ತಮ್ಮ ಹತ್ತಿರದ ಕಾನೂನು ಸೇವಾ ಕೇಂದ್ರಗಳನ್ನು ಸಂರ್ಪಸಬಹುದು.

ಪ್ರಾಧಿಕಾರದಿಂದ ಅನುಭವಿ ವಕೀಲರ ಆಯ್ಕೆ

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು 2700 ವಕೀಲರ ಸೇವೆಯನ್ನು ಸಿವಿಲ್ ಕೇಸ್​ಗಳಲ್ಲಿ ಒದಗಿಸುತ್ತಿದೆ. ಕ್ರಿಮಿನಲ್ ಕೇಸ್​ಗಳಲ್ಲಿ ಅರ್ಹರ ಪರ ವಾದಿಸಲು 237 ವಕೀಲರನ್ನು ಪೂರ್ಣಕಾಲಿಕವಾಗಿ ನೇಮಿಸಿಕೊಂಡಿದೆ. 8634 ಪ್ರಕರಣಗಳನ್ನು ಅವರು ನಿರ್ವಹಿಸುತ್ತಿದ್ದಾರೆ. ಹಿರಿಯ ಮತ್ತು ಅನುಭವಿ ವಕೀಲರನ್ನು ಆಯ್ಕೆ ಮಾಡಲಾಗಿದೆ.

ಸಂತ್ರಸ್ತರಿಗೆ 30 ಕೋಟಿ ರೂ. ಪರಿಹಾರ

ನ್ಯಾಯಾಲಯಗಳು ಸೂಚಿಸಿದ ಅಪರಾಧ ಪ್ರಕರಣಗಳ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನೀಡುವ ಕಾರ್ಯವನ್ನು ಜಿಲ್ಲಾ ಕಾನೂನು ಸೇವೆಗಳ ಕೇಂದ್ರದ ಮೂಲಕ ಮಾಡಲಾಗುತ್ತದೆ. ಪೋಕ್ಸೊ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯವೇ ಪರಿಹಾರ ಮೊತ್ತವನ್ನು ನಿಗದಿ ಮಾಡಿರುತ್ತದೆ. ಇವುಗಳ ಪರಿಹಾರ ಮೊತ್ತ ನೀಡುವ ಜವಾಬ್ದಾರಿ ಕಾನೂನು ಸೇವಾ ಪ್ರಾಧಿಕಾರಕ್ಕಿದೆ. ವಿವಿಧ ರೀತಿಯ 794 ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲು ಈ ವರ್ಷ 30 ಕೋಟಿ ರೂ.ಗಳನ್ನು ಸರ್ಕಾರ ಪ್ರಾಧಿಕಾರಕ್ಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net