

ನವದೆಹಲಿ: ಅಮೆರಿಕದ ರಕ್ಷಣಾ ಇಲಾಖೆ ಕೆಲ ದಿನಗಳ ಹಿಂದಷ್ಟೇ "ಹಾರುವ ತಟ್ಟೆ" ಅಥವಾ ಅನ್ಯಗ್ರಹ ಜೀವಿಗಳ ನೌಕೆ ಎಂದೇ ನಂಬಲಾಗಿದ್ದ ಮೂರು ವಿಡಿಯೋಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿತು.
ದಶಕಗಳ ಹಿಂದೆಯೇ ನೌಕಾಪಡೆ ಪೈಲಟ್ಗಳು ಇದನ್ನು ಚಿತ್ರೀಕರಿಸಿದ್ದರು. ಕೆಲ ವರ್ಷಗಳ ಹಿಂದೆ ಎರಡು ವಿಡಿಯೋಗಳು ಸೋರಿಕೆಯಾಗಿದ್ದವು. ಇವುಗಳು ಎನು ಎಂಬ ಬಗ್ಗೆ ಜನರಲ್ಲಿ ಕುತೂಹಲವಿತ್ತು. ಅದನ್ನು ತಣಿಸಲೆಂದೇ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿತ್ತು. ಅಷ್ಟಕ್ಕೂ ಇದರಲ್ಲಿ ಇರುವುದು ಏನು ಎಂಬ ಬಗ್ಗೆ ಸ್ಪಷ್ಟಪಡಿಸಿಲ್ಲ. ಆದರೆ, ಈ ವಿಡಿಯೋಗಳು ನೈಜವಾದದ್ದು ಎಂದಷ್ಟೇ ಅಧಿಕಾರಿಗಳು ಹೇಳಿದ್ದಾರೆ.
ಜನರು ಇವನ್ನು ಅನ್ಯಗ್ರಹಗಳ ಜೀವಿಗಳದ್ದೇ ಎಂದೇ ನಂಬಿಕೊಂಡಿದ್ದಾರೆ. ಇಂದಿಗೂ ಜಗತ್ತಿನ ವಿವಿಧ ದೇಶಗಳಲ್ಲಿ ಅನ್ಯಜೀವಿಗಳನ್ನು ಪತ್ತೆಹಚ್ಚಲೆಂದೇ ಸಾವಿರಾರು ಕೋಟಿ ರೂ.ಗಳ ಯೋಜನೆ ಜಾರಿಯಲ್ಲಿದೆ. ಅತ್ಯಾಧುನಿಕ ದೂರದರ್ಶಕಗಳನ್ನು ಸ್ಥಾಪಿಸಲಾಗಿದೆ. ರೆಡಿಯೋ ಸಂದೇಶಗಳನ್ನು ನಿಯಮಿತವಾಗಿ ಆಗಸಕ್ಕೆ ಚಿಮ್ಮಿಸಲಾಗುತ್ತಿದೆ. ಉಪಗ್ರಹಗಳನ್ನು, ಆಕಾಶಕಾಯಗಳನ್ನು ಹಾರಿಬಿಟ್ಟು ಅವರಿಗೆ ತಲುಪಿಸುವ ಯತ್ನ ನಡೆಸಲಾಗುತ್ತಿದೆ.
ಇದೀಗ, ಇವರ ಅಸ್ತಿತ್ವಕ್ಕೆ ಇಂಬು ಕೊಡುವ ವಿದ್ಯಮಾನವೊಂದು ಜರುಗಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ನಮ್ಮ ಕ್ಷಿರಪಥದಿಂದ ಅಂದಾಜು 30,000 ಜ್ಯೋರ್ತಿವರ್ಷಗಳಷ್ಟು ದೂರವಿರುವ ಮೃತ ನಕ್ಷತ್ರವೊಂದರಿಂದ ಭಾರಿ ಗಾತ್ರದ ರೆಡಿಯೋ ಅಲೆಯೊಂದು ಹೊರಹೊಮ್ಮಿರುವುದನ್ನು ಕಂಡು ಹಿಡಿಯಲಾಗಿದೆ. ಈ ಮೃತನಕ್ಷತ್ರವನ್ನು ಎಸ್ಜಿಆರ್ 1935+2154 ಎಂಬ ಸಂಕೇತಾಕ್ಷರಗಳಿಂದ ಗುರುತಿಸಲಾಗುತ್ತದೆ. ಇದರಿಂದ ಹೊರಟ ರೆಡಿಯೋ ಅಲೆಯನ್ನು ಫಾಸ್ಟ್ ರೆಡಿಯೋ ಬರ್ಸ್ಟ್ (ಎಫ್ಆರ್ಬಿ) ಎಂದು ಕರೆಯಲಾಗಿದೆ. ಅತ್ಯಂತ ಶಕ್ತಿಶಾಲಿಯಾದ ರೆಡಿಯೋ ತರಂಗ ಅಂದಾಜು ಐದು ಮಿಲಿ ಸೆಕೆಂಡ್ ಅವಧಿಯದ್ದಾಗಿದೆ.
ಕಳೆದ ಏಪ್ರಿಲ್ 28ರಂದು ಇದನ್ನು ಖಗೋಳಶಾಸ್ತ್ರಜ್ಞರು ಗುರುತಿಸಿದ್ದಾರೆ. ಇದು ಎಷ್ಟು ಪ್ರಬಲವಾಗಿದೆ ಎಂದರೆ, ಇತರ ಕ್ಷೀರಪಥಗಳಿಂದಲೂ ಇದನ್ನು ಗುರುತಿಸಬಹುದು ಅಥವಾ ಆಲಿಸಬಹುದು ಎಂದು ಹೇಳಿದ್ದಾರೆ.
ಸ್ವಿಪ್ಟ್ ಬರ್ಸ್ಟ್ ಅಲರ್ಟ್ ಟೆಲಿಸ್ಕೋಪ್, ಇಟಲಿಯ ಉಪಗ್ರಹ, ಅಂತಾರಾಷ್ಟ್ರಿಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಪಕರಣ ಹಾಗೂ ಇತರ ಹಲವು ವೀಕ್ಷಣಾಲಯಗಳು ಕೂಡ ಈ ರೆಡಿಯೋ ತರಂಗವನ್ನು ದಾಖಲಿಸಿದೆ. ಇಂಥದ್ದೊಂದು ವಿದ್ಯಮಾನ ಈ ಹಿಂದೆ ವರದಿಯಾಗಿರಲಿಲ್ಲ ಎಂದು ಕಾಲ್ಟೆಕ್ ಸಂಸ್ಥೆಯ ಖಗೋಳಶಾಸ್ತ್ರಜ್ಞ ಶ್ರೀನಿವಾಸ ಕುಲಕರ್ಣಿ ಹೇಳಿದ್ದಾರೆ.
ಇನ್ನೊಂದು ಸಾಧ್ಯತೆ ಎಂದರೆ, ನಕ್ಷತ್ರವನ್ನು ಆವರಿಸಿರುವ ಕಾಂತೀಯ ಕ್ಷೇತ್ರ ಹಾಗೂ ಗುರುತ್ವಾಕರ್ಷಣ ಬಲದ ನಡುವೆ ಉಂಟಾಗುವ ಘರ್ಷಣೆಯಿಂದಾಗಿಯೂ ಇಂಥ ತರಂಗಗಳು ಉಂಟಾಗಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ. ಇದಕ್ಕಾಗಿ ಭಾರಿ ಶಕ್ತಿಯ ಅಗತ್ಯವಿರುವುದಿಲ್ಲ. ನಕ್ಷತ್ರ ಹಾಗೂ ಕಾಂತೀಯ ಕ್ಷೇತ್ರಗಳು ಇಂಥ ಸಾವಿರಾರು ಉತ್ಪಾತವನ್ನು ನಿರ್ವಹಿಸಬಲ್ಲವು ಎಂದು ಮಾಹಿತಿ ನೀಡುತ್ತಾರೆ.