ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಧಿಕಾರ

hos pura panchayat
ಹೊಸನಗರ ಪಪಂ ಕಾರ್ಯಾಲಯ.
Published on

ಹೊಸನಗರ: ಹೊಸನಗರ ಪಪಂನ ದ್ವಿತಿಯಾರ್ಧದ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ನಿರೀಕ್ಷೆಯಂತೆ ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ.

ಅಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾಗಿದ್ದು, ಬಿಜೆಪಿಯಿಂದ ಗುಲಾಬಿ ಮರಿಯಪ್ಪ ಹಾಗೂ ಜೆಡಿಎಸ್‌ನಿಂದ ನಾಗಪ್ಪ ಅವರಿಗೆ ಅವಕಾಶವಿದೆ. ಗುಲಾಬಿ ಮರಿಯಪ್ಪ ಎರಡು ಬಾರಿ ಬಿಜೆಪಿಯಿಂದ ಗೆದ್ದು ಅಧ್ಯಕ್ಷರಾಗಿದ್ದರು. ಜೆಡಿಎಸ್‌ನಿಂದ ನಾಗಪ್ಪ ಮೊದಲ ಬಾರಿ ಗೆದ್ದಿದ್ದು, ಇವರಿಬ್ಬರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯ ಗಾಯತ್ರಿ ನಾಗರಾಜ್ ಹಾಗೂ ಜೆಡಿಎಸ್‌ನ ಕೃಷ್ಣವೇಣಿ ಅವರಿಗೆ ಅವಕಾಶವಿದೆ.
ಹೊಸನಗರ ಪಪಂ 11 ಸದಸ್ಯ ಬಲ ಹೊಂದಿದ್ದು, 4 ಕಾಂಗ್ರೆಸ್, 4 ಬಿಜೆಪಿ ಮತ್ತು 3 ಜೆಡಿಎಸ್ ಸದಸ್ಯರಿದ್ದಾರೆ. ಕಳೆದ ಅವಧಿಯಲ್ಲಿ ಗುಲಾಬಿ ಮರಿಯಪ್ಪ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಾಗಿ ಕೃಷ್ಣವೇಣಿ ಆಯ್ಕೆಯಾಗಿದ್ದರು. ಅಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿದ್ದರೂ ಜೆಡಿಎಸ್ ಸದಸ್ಯರಾದ ಕೃಷ್ಣವೇಣಿ ಮತ್ತು ನಾಗಪ್ಪ ಬಿಜೆಪಿ ಸೇರಿದ್ದರಿಂದ ಪಪಂಯಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು.
ಉತ್ಸಾಹ ತೋರದ ಶಾಸಕ: ಈ ಬಾರಿಯ ಮೀಸಲು ವಿಚಾರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಉತ್ಸಾಹ ತೋರಿಲ್ಲ ಎಂದು ಪಕ್ಷದ ಮುಖಂಡರಲ್ಲೇ ಚರ್ಚೆ ನಡೆಯುತ್ತಿದೆ. ಕಳೆದ ಬಾರಿ ಎಸ್ಸಿ ಮಹಿಳೆಗೆ ಮೀಸಲಿದ್ದ ಕಾರಣ ಈ ಬಾರಿ ಸಾಮಾನ್ಯ ವರ್ಗಕ್ಕೆ ಅವಕಾಶ ಕೊಡಬಹುದಿತ್ತು. ಜೆಡಿಎಸ್ ಕೂಡ ಬಿಜೆಪಿ ಜತೆ ಮೈತ್ರಿ ಇರುವ ಕಾರಣ ಕೇವಲ 4 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಪಪಂ ಆಯ್ಕೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. ಒಟ್ಟಾರೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಮೌನ ವಹಿಸಿದ್ದರೆ, ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net