

| ಮೃತ್ಯುಂಜಯ ಕಪಗಲ್ ಬೆಂಗಳೂರು
ಧಾರಾಕಾರ ಮಳೆಯಿಂದಾಗಿ ಕಲ್ಲಿದ್ದಲು ಪೂರೈಕೆ ಏರುಪೇರಾಗಿ ರುವುದು ಮತ್ತು ಶಾಖೋತ್ಪನ್ನ ನೆಲೆಯ ವಿದ್ಯುತ್ ಉತ್ಪಾದನೆ ಕುಸಿದಿರುವ ಕಾರಣದಿಂದಾಗಿ ರಾಜ್ಯಕ್ಕೆ ಕತ್ತಲಾತಂಕ ಎದುರಾಗಿದೆ. ಸದ್ಯಕ್ಕೆ ದಿನದ ವಿದ್ಯುತ್ ಬೇಡಿಕೆ 7,500 ಮೆಗಾವಾಟ್ ಹಾಗೂ ಬಳಕೆ ಪ್ರಮಾಣ 181 ದಶಲಕ್ಷ ಯೂನಿಟ್ ಆಸುಪಾಸಿನಲ್ಲಿದೆ. ಆದರೆ ಒತ್ತಡದ ಅವಧಿ (ಪೀಕ್ ಅವರ್)ಯಲ್ಲಿ ಬೇಡಿಕೆ 8,000 ಮೆಗಾವಾಟ್ ದಾಟುವ ಸಾಧ್ಯತೆಗಳಿವೆ. ಇದಕ್ಕೂ ಮೀರಿ ಬೇಡಿಕೆ ಹೆಚ್ಚಾದರೆ ಕೊರತೆ ಸರಿದೂಗಿಸಿಕೊಳ್ಳಲು ಅಘೋಷಿತ ಲೋಡ್ಶೆಡ್ಡಿಂಗ್ ಅನಿವಾರ್ಯವಾಗಲಿದೆ. ವ್ಯತಿರಿಕ್ತ ವಾತಾವರಣದಿಂದ ಪವನ ಹಾಗೂ ಸೌರ ಮೂಲದ ಉತ್ಪಾದನೆ ತಗ್ಗಿರುವುದು ಕೂಡ ಕಳವಳಕಾರಿ ಪರಿಸ್ಥಿತಿ ಮುನ್ಸೂಚನೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.
ಸಮಸ್ಯೆಯ ಮೂಲ: ಕಲ್ಲಿದ್ದಲು ಪೂರೈಕೆ ಮೂಲಗಳಾದ ತೆಲಂಗಾಣದ ಸಿಂಗರೇಣಿ, ಮಹಾರಾಷ್ಟ್ರದ ವೆಸ್ಟರ್ನ್ ಕೋಲ್ ಫೀಲ್ಡ್ಸ್‌ನಲ್ಲೂ ಉತ್ಪಾದನೆಗೆ ಹೊಡೆತ ಬಿದ್ದಿದೆ. ಅಲ್ಲದೆ, ಹೊರತೆಗೆದ ಕಲ್ಲಿದ್ದಲನ್ನು ರೈಲು ರೇಕ್ಗಳಲ್ಲಿ ಸಾಗಿಸುವುದು ಸಮಸ್ಯೆಯಾಗಿದೆ. ಕೊರತೆ ಸರಿದೂಗಿಸಿಕೊಳ್ಳಲು ಒತ್ತಡ ಹೇರಿ ತರಿಸಿಕೊಂಡರೂ ತೋಯ್ದ ಕಲ್ಲಿದ್ದಲು ಬರುವುದರಿಂದ ಪ್ರಯೋಜನವಾಗದು. ಜತೆಗೆ ದಾಸ್ತಾನು ಖಾಲಿಯಾಗಿರುವುದು ಶಾಖೋತ್ಪನ್ನ ಸ್ಥಾವರಗಳ ಸಮಸ್ಯೆ ಹೆಚ್ಚಿಸಿದೆ. ಹೀಗಾಗಿ ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಒಟ್ಟಾರೆ ಸಾಮರ್ಥ್ಯದಲ್ಲಿ ಶೇ.30 ಮಾತ್ರ ವಿದ್ಯುತ್ ಉತ್ಪಾದನೆಗೆ ಶಕ್ತವಾಗಿವೆ.
ಆರ್ಟಿಪಿಎಸ್ನ 8 ಘಟಕಗಳನ್ನು ಚಾಲ್ತಿಯಲ್ಲಿಟ್ಟರೆ ಪ್ರತಿದಿನ 25,000 ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕಾಗುತ್ತದೆ. ಈಗಿರುವುದು 1,200 ಮೆಟ್ರಿಕ್ ಟನ್ಗಳಾದರೆ, ಸಿಂಗರೇಣಿಯ ಎರಡು ರೇಕ್ (ತಲಾ 3,200-3,600 ಟನ್), ನಾಗ್ಪುರದ ಒಂದು ರೇಕ್ ಕಲ್ಲಿದ್ದಲು ಲಭ್ಯವಾಗುತ್ತಿದೆ. ಇದರಿಂದಾಗಿ ನಾಲ್ಕು ಘಟಕಗಳು ಸಾಮರ್ಥ್ಯದ ಮುಕ್ಕಾಲು ಭಾಗವಷ್ಟೇ ವಿದ್ಯುತ್ ಉತ್ಪಾದಿಸುತ್ತಿದ್ದು, ಬೇಡಿಕೆ ಕಡಿಮೆಯಿರುವುದು ಸ್ವಲ್ಪಮಟ್ಟಿಗೆ ಒತ್ತಡ ಕಡಿಮೆ ಮಾಡಿದೆ. ಸಿಂಗರೇಣಿಯಿಂದ ಪ್ರತಿದಿನ 6 ರೇಕ್ಗಳು ಬರುತ್ತಿದ್ದರೂ 3 ಘಟಕಗಳಿಗೂ (ಆರ್ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್) ತಲಾ ಎರಡು ಹಂಚಿಕೊಂಡು ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿವೆ. ವೈಟಿಪಿಎಸ್ನ ತಲಾ 800 ಮೆಗಾವಾಟ್ ಉತ್ಪಾದನೆ ಸಾಮರ್ಥ್ಯದ ಎರಡು ಘಟಕಗಳಿಗೆ ಪ್ರತಿದಿನ 24,000 ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕಾಗುತ್ತದೆ.
ಸಿಂಗರೇಣಿ ಶಾಕ್!: ಕರ್ನಾಟಕ ವಿದ್ಯುತ್ ನಿಗಮವು 1,165 ಕೋಟಿ ರೂ.ಗೂ ಹೆಚ್ಚು ಬಾಕಿ ಪಾವತಿಸಬೇಕಿರುವ ಕಾರಣಕ್ಕೆ ಕಲ್ಲಿದ್ದಲು ಪೂರೈಕೆ ಪ್ರಮಾಣ ತಗ್ಗಿಸುವ ಮೂಲಕ ಸಿಂಗರೇಣಿ ಕೋಲಾರೀಸ್ ಶಾಕ್ ನೀಡಿದೆ. ಬಾಕಿ ಪಾವತಿಸದಿದ್ದರೆ ಪೂರೈಕೆ ಕಡಿತ ಮಾಡಬೇಕಾಗುತ್ತದೆ ಎಂದು ತಿಂಗಳ ಹಿಂದೆಯೇ ಮೌಖಿಕ ಎಚ್ಚರಿಕೆ ನೀಡಿದೆ. ಬೇರೆಡೆಯಿಂದ ಬೇಡಿಕೆ ಹೆಚ್ಚಳ ಕಾರಣವಾಗಿಟ್ಟುಕೊಂಡು ಕಳೆದ 15 ದಿನಗಳಿಂದ ಅರ್ಧದಷ್ಟು ರೇಕ್ಗಳಿಗೆ ಕೊಕ್ಕೆ ಹಾಕಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸರ್ಕಾರದ ವೈಫಲ್ಯ?: ಮಳೆಗಾಲದಲ್ಲಿ ಕಲ್ಲಿದ್ದಲು ಗಣಿಗಾರಿಕೆ, ಪೂರೈಕೆಗೆ ಸಮಸ್ಯೆಯಾಗುತ್ತದೆ. ತೋಯ್ದ ಕಲ್ಲಿದ್ದಲು ಬಳಕೆ ಅಸಾಧ್ಯವೆಂಬುದು ಹೊಸದೇನಲ್ಲ. ಇದನ್ನರಿತು ಈ ಹಿಂದೆ ಶಾಖೋತ್ಪನ್ನ ಸ್ಥಾವರಗಳಲ್ಲಿ 10 ರಿಂದ 15 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿರುತ್ತಿತ್ತು. ಅದಕ್ಕಿಂತ ಹೆಚ್ಚಿನ ಅವಧಿಯ ದಾಸ್ತಾನಿದ್ದರೂ ತಳದ ಕಲ್ಲಿದ್ದಲು ಸುಟ್ಟು ನಷ್ಟವಾಗುತ್ತದೆ. ಹೀಗಾಗಿ ತಿಂಗಳಿಗೆ ಬೇಕಾಗುವಷ್ಟು ಸಂಗ್ರಹದ ಗೊಡವೆಗೆ ಹೋಗುತ್ತಿಲ್ಲ. ಸಂಕಷ್ಟ ಪರಿಹಾರ ಸೂತ್ರದ ಅನ್ವಯ ತುರ್ತು ಅಗತ್ಯವಿರುವಷ್ಟು ದಾಸ್ತಾನು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಪರಿಸರಕ್ಕೆ ಹಾನಿ, ದುಬಾರಿ ಎಂಬ ನೆಪವೊಡ್ಡಿ ಥರ್ಮಲ್ ಘಟಕಗಳತ್ತ ನಿರ್ಲಕ್ಷ್ಯ ಹೆಚ್ಚಿದೆ. ಸೌರ, ಪವನ ಅದರಲ್ಲೂ ಖಾಸಗಿ ಕಂಪನಿಗಳತ್ತ ಎಸ್ಕಾಂಗಳಿಗೆ ಒಲವು ಹೆಚ್ಚಿದೆ. ಇದೂ ಕೂಡ ಶಾಖೋತ್ಪನ್ನ ಸ್ಥಾವರಗಳ ಅನಾದರಕ್ಕೆ ಮತ್ತೊಂದು ಕಾರಣವೆಂದು ಮೂಲಗಳು ಬೇಸರ ವ್ಯಕ್ತಪಡಿಸಿವೆ.
ಸಿಂಗರೇಣಿ ಮೇಲೆ ಒತ್ತಡ: ಉತ್ತರಭಾರತದ ಶಾಖೋತ್ಪನ್ನ ಸ್ಥಾವರಗಳಿಗೆ ಜಾರ್ಖಂಡ್ನ ಧನಬಾದ್ ಕಲ್ಲಿದ್ದಲು ಗಣಿಗಳು ಆಧಾರಸ್ತಂಭವಾದರೆ, ದಕ್ಷಿಣ ಭಾರತದ ಬಹುತೇಕ ಥರ್ಮಲ್ ಸ್ಥಾವರಗಳಿಗೆ ತೆಲಂಗಾಣದ ಸಿಂಗರೇಣಿ ಮತ್ತು ಮಹಾರಾಷ್ಟ್ರದ ನಾಗ್ಪುರ ಗಣಿಗಳು ಆಧಾರವಾಗಿವೆ. ಭಾರಿ ಮಳೆಯಿಂದಾಗಿ ದೇಶದ ಬಹುತೇಕ ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆಗೆ ಹೊಡೆತ ಬಿದ್ದಿದ್ದರೂ ಸಿಂಗರೇಣಿ ಕೋಲಾರೀಸ್ಗೆ ಉತ್ಪಾದನೆಗಿಂತ ಸಾಗಣೆ ಸಮಸ್ಯೆಯಾಗಿದೆ. ಕಪು್ಪ ಚಿನ್ನಕ್ಕೆ ದಿಢೀರ್ ಬೇಡಿಕೆ ಹೆಚ್ಚಿರುವ ಪರಿಣಾಮ ಸಿಂಗರೇಣಿ ಮೇಲೆ ಒತ್ತಡ ಹೆಚ್ಚತೊಡಗಿದೆ ಎಂದು ಮೂಲಗಳು ತಿಳಿಸಿವೆ.
ಕಲ್ಲಿದ್ದಲು ಖಾಲಿಯಾಗಿದೆ. ಪೂರೈಕೆಯೂ ತಗ್ಗಿರುವುದರಿಂದ 3 ಘಟಕಗಳಲ್ಲಿ ಎರಡನ್ನು ಸ್ಥಗಿತಗೊಳಿಸಿ, ಒಂದನ್ನು ಚಾಲನೆಯಲ್ಲಿಟ್ಟಿದ್ದೇವೆ. ಬೇಡಿಕೆ ಅನುಸಾರ ಕಲ್ಲಿದ್ದಲು ಪೂರೈಕೆಯಾದರೆ ಉತ್ಪಾದನೆ ಯಥಾಸ್ಥಿತಿಗೆ ಮರಳಲಿದೆ.
| ಶಶಿಕಾಂತ್ ಕಾರ್ಯನಿರ್ವಾಹಕ ನಿರ್ದೇಶಕ, ಬಿಟಿಪಿಎಸ್.
ಸದ್ಯಕ್ಕೆ 12,000 ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದ್ದು, 2 ಗಣಿಗಳಿಂದ ದಿನಕ್ಕೆ 3 ರೇಕ್ಗಳಷ್ಟು ಪೂರೈಕೆಯಾಗುತ್ತಿದೆ. ಹೀಗಾಗಿ 8 ಘಟಕಗಳ ಪೈಕಿ ನಾಲ್ಕಷ್ಟೇ ವಿದ್ಯುತ್ ಉತ್ಪಾದಿಸುತ್ತಿದ್ದು, ಮಳೆಯಿಂದಾಗಿ ಈ ಸಮಸ್ಯೆ ತಲೆದೋರಿದೆ.
| ಕೆ.ವಿ.ವೆಂಕಟಾಚಲಪತಿ ಕಾರ್ಯನಿರ್ವಾಹಕ ನಿರ್ದೇಶಕ, ಆರ್ಟಿಪಿಎಸ್.
ಸಾಗಾಟದಲ್ಲಿ ವ್ಯತ್ಯಯದಿಂದಾಗಿ ಶಾಖೋತ್ಪನ್ನ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆಯಾಗಿ ರುವುದು ನಿಜ. ಹಾಗಂತ ಆತಂಕದ ಪರಿಸ್ಥಿತಿಯಿಲ್ಲ. ನವೀಕರಿಸಬಹುದಾದ ಇಂಧನ ಮೂಲಗಳಿಂದ ಸರಿದೂಗಿಸುತ್ತೇವೆ. ಕೇಂದ್ರ ಕಲ್ಲಿದ್ದಲು ಸಚಿವರಿಗೂ ಪತ್ರ ಬರೆದು ಕಲ್ಲಿದ್ದಲು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಕೋರಿರುವೆ.
| ವಿ.ಸುನೀಲ್ಕುಮಾರ್ ಇಂಧನ ಸಚಿವ
ಸ್ಟಾಕ್ ಖಾಲಿ: ಪ್ರತಿದಿನ ಬಂದಷ್ಟೇ ಬಳಸಬೇಕಾಗಿರುವ ಹಿನ್ನೆಲೆಯಲ್ಲಿ ಒಂದು ಘಟಕ ನಿಲ್ಲಿಸಿದ್ದು, ಇನ್ನೊಂದು ಘಟಕ ಶೇ.75 ವಿದ್ಯುತ್ ಉತ್ಪಾದಿಸುತ್ತಿದೆ. ಬಳ್ಳಾರಿ ಶಾಖೋತ್ಪನ್ನ ಸ್ಥಾವರದಲ್ಲೂ ದಾಸ್ತಾನು ಬರಿದಾದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ಮೂರನೇ ಘಟಕ (700 ಮೆ.ವಾ), ಅ.2ರಂದು 2ನೇ ಘಟಕ (500 ಮೆ.ವಾ.) ಸ್ಥಗಿತಗೊಳಿಸಲಾಗಿದೆ.
ಮಹಾರಾಷ್ಟ್ರದ ಚಂದ್ರಾಪುರ (ವೆಸ್ಟರ್ನ್ ಕೋಲ್ ಫೀಲ್ಡ್್ಸ ಕ್ಯಾಪ್ಟಿವ್ ಕೋಲ್ ಮೈನ್ ಅನ್ನು ಬಿಟಿಪಿಎಸ್ ಗುತ್ತಿಗೆ ಪಡೆದಿದೆ. ಗಣಿಯಿಂದ ಕಲ್ಲಿದ್ದಲು ಹೊರತೆಗೆದು ಸಾಗಿಸುವುದಕ್ಕೆ ಹೊರಗುತ್ತಿಗೆ ನೀಡಲಾಗಿದೆ. ಈ ಕಂಪನಿ ನಿರೀಕ್ಷೆಯಂತೆ ಆಗಸ್ಟ್ನಲ್ಲಿ ಕಲ್ಲಿದ್ದಲು ಪೂರೈಕೆ ಶುರುಮಾಡಿತ್ತು. ನಿರಂತರ ಮಳೆಯಿಂದಾಗಿ ಸೆಪ್ಟೆಂಬರ್ನಿಂದ ಅಡಚಣೆಯಾಗಿದ್ದು, ಒಂದು ರೇಕ್ ಬರುತ್ತಿದ್ದುದೂ ಈಗ ನಿಂತಿರುವುದಾಗಿ ತಿಳಿದು ಬಂದಿದೆ.