ವಿದ್ಯುತ್ ಶಾಕ್​ಗೆ ಒಣಗುತ್ತಿವೆ ಬೆಳೆ!; ದಿನಕ್ಕೆ 4 ಗಂಟೆ ಮಾತ್ರ ತ್ರಿಪೇಸ್

25CBP1(drought)
Published on

ಚಿಕ್ಕಬಳ್ಳಾಪುರ : ಬೇಸಿಗೆ ಆರಂಭವಾಗುತ್ತಿದ್ದಂತೆ ಬಯಲುಸೀಮೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರದ ಜತೆಗೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸಪಡುವಂತಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ಫಸಲಿನ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ತಗುಲಿದಂತಾಗಿದೆ.

ಇತ್ತೀಚೆಗೆ ಕೃಷಿ ಪಂಪ್​ಸೆಟ್​ಗಳಿಗೆ 7 ಗಂಟೆಯ ಬದಲಿಗೆ 4 ಗಂಟೆ ತ್ರಿಪೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಇದರ ನಡುವೆ ಲೋಡ್ ಶೆಡ್ಡಿಂಗ್, ಸಿಂಗಲ್ ಪೇಸ್, ಕಾಮಗಾರಿ ನಿರ್ವಹಣೆ ನೆಪದಲ್ಲಿ ಕರೆಂಟ್ ಕಟ್ ಮಾಡಲಾಗುತ್ತಿದೆ. ಇದರಿಂದಾಗಿ ಕೊಳವೆಬಾವಿ ಮೂಲಕ ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.

ಬಿಸಿಲಿಗೆ ಉಷ್ಣಾಂಶ ಹೆಚ್ಚಾಗಿ ಭೂಮಿ ಒಣಗುತ್ತಿದೆ. ಈ ವೇಳೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ನೀರು ಹಾಯಿಸಬೇಕು. ಆದರೆ ನೀರಿಲ್ಲದೆ ಬೆಳೆಗಳು ಕಪು್ಪ ಇಲ್ಲವೇ ಕಂದು ಬಣ್ಣಕ್ಕೆ ತಿರುಗಿ ನಶಿಸುತ್ತಿವೆ. ಮತ್ತೊಂದೆಡೆ ವೋಲ್ಟೇಜ್ ವ್ಯತ್ಯಾಸದಿಂದ ಮೋಟಾರ್​ಗಳು ಸುಡುತ್ತಿದ್ದು, ಬೆಳೆ ನಷ್ಟದ ಜತೆಗೆ ಆರ್ಥಿಕ ಹೊರೆಯೂ ರೈತರ ಬೆನ್ನುಹತ್ತಿದೆ.

ಜಿಲ್ಲೆಯು ಕಳೆದ 11 ವರ್ಷಗಳಲ್ಲಿ 8 ಬಾರಿ ಬರಕ್ಕೆ ತುತ್ತಾಗಿದೆ. ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಅಂತರ್ಜಲಮಟ್ಟ ಪಾತಾಳ ಸೇರುವ ಜತೆಗೆ ಅಲ್ಪಸ್ವಲ್ಪ ನೀರು ಇರುವ ಬೋರ್​ವೆಲ್​ಗಳು ಬತ್ತುತ್ತಿದ್ದು, ಇಂತಹ ದುಸ್ಥಿತಿಯ ಪರಿಸ್ಥಿತಿಯಲ್ಲೂ ರೈತರು ಧೃತಿಗೆಡದೆ ಬೆಳೆಗಳನ್ನು ಬೆಳೆದಿದ್ದಾರೆ, ಆದರೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಈ ಬೆಳೆಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ.

ಬೆಳೆ ಉಳಿಸಿಕೊಳ್ಳುವ ಆತಂಕ : ಜಿಲ್ಲೆಯ ರೈತರು ಬಗೆಬಗೆಯ ಹೂವು, ಹಣ್ಣು ಮತ್ತು ತರಕಾರಿ ಬೆಳೆದಿದ್ದಾರೆ, ಈಗಾಗಲೇ ಬಹುತೇಕ ಅರ್ಧ ಫಸಲಿಗೆ ಬಂದಿದೆ. ಈ ವೇಳೆ ಸಮರ್ಪಕವಾಗಿ ನೀರು ಹರಿಸದಿದ್ದಲ್ಲಿ ಬೆಳೆ ಒಣಗಿ ನಷ್ಟವಾಗುತ್ತದೆ. ಬೇಸಿಗೆಯಲ್ಲಿ ಸೀಡ್​ಲೇಸ್, ಕೃಷ್ಣ ಶರತ್ತು, ಸೊನೆಕಾ, ರೆಡ್ ಗ್ಲೊಬ್, ಸೂಪರ್ ಸೊನೆಕಾ, ದಿಲ್​ಕುಷ್, ಅನಾಭಿಶ್, ಕಾಬೂಲ್, ಕಪ್ಪು ದ್ರಾಕ್ಷಿ , ಚಾಮಂತಿ, ಚೆಂಡು, ಗುಲಾಬಿ, ಟೊಮ್ಯೊಟೊ, ಮಾವು, ಸಪೋಟ, ಕ್ಯಾರೆಟ್ ಸೇರಿ ಇತರ ಬೆಳೆಗಳಿಗೆ ಹೆಚ್ಚಿನ ನೀರು ಪೂರೈಸಬೇಕು. ಆದರೆ, ವಿದ್ಯುತ್ ಪೂರೈಕೆ ಸಮಸ್ಯೆಯಿಂದ ನೀರಿನ ಅಭಾವ ಉಂಟಾಗಿದ್ದು ರೈತರಿಗೆ ದಿಕ್ಕೆ ತೋಚದಾಗಿದೆ.

ವಿದ್ಯುತ್ ಪೂರೈಕೆ ಸಮಸ್ಯೆ : ಜಿಲ್ಲೆಗೆ ದಿನಕ್ಕೆ ಕನಿಷ್ಠ 35 ಯೂನಿಟ್ ವಿದ್ಯುತ್ ಅಗತ್ಯವಿದೆ. ಆದರೆ, ಬೇಸಿಗೆಯಲ್ಲಿ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆ ಪ್ರಮಾಣ ಕುಸಿದು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎನ್ನಲಾಗುತ್ತಿದೆ, ಇದರ ಜತೆಗೆ ಬೇಡಿಕೆ ಹೆಚ್ಚಳವಾಗಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದ್ದು, ಟ್ರಾನ್ಸ್​ಫಾರ್ಮರ್​ಗಳು ಸುಡುತ್ತಿರುವುದು, ಲೈನ್ ಟ್ರಿಫ್ ಮತ್ತು ಇತರ ಕಾರಣಗಳಿಂದ ಸಮಸ್ಯೆ ಹೆಚ್ಚಾಗಿದೆ ಎನ್ನುವುದು ಬೆಸ್ಕಾಂ ಅಧಿಕಾರಿಗಳ ಸಮಜಾಯಿಷಿ.

ಇತ್ತೀಚೆಗೆ ಲೋಡ್ ಶೆಡ್ಡಿಂಗ್ ನಡುವೆ ದಿನಕ್ಕೆ 7 ಗಂಟೆಯ ಬದಲಿಗೆ ಬೆಳಗ್ಗೆ ಮತ್ತು ರಾತ್ರಿ ತಲಾ 2 ಗಂಟೆ ಸೇರಿ ಒಟ್ಟು 4 ಗಂಟೆ ತ್ರಿಪೇಸ್ ವಿದ್ಯುತ್ ಪೂರೈಕೆಯಾಗುತ್ತಿದೆ. ಇದರಿಂದ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಬೆಳೆ ಒಣಗುವ ಆತಂಕ ಕಾಡುತ್ತಿದೆ. ಸಮಸ್ಯೆಯತ್ತ ರೈತ ಸಂಘಟನೆಗಳು ಧ್ವನಿ ಎತ್ತುತ್ತಿಲ್ಲ. ಮಂಜುನಾಥ್, ರೈತ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಇತ್ತು. ಇದೀಗ ಬಗೆಹರಿದಿದೆ. ಸಮರ್ಪಕ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಶಿವಶರಣ, ಕಾರ್ಯಪಾಲಕ ಅಭಿಯಂತ, ಬೆಸ್ಕಾಂ ಕೃಷಿ ಪಂಪ್ ಸೆಟ್​ಗಳಿಗೆ ದಿನಕ್ಕೆ 7 ಗಂಟೆ ತ್ರೀಫೇಸ್ ವಿದ್ಯುತ್ ಪೂರೈಸುವಿಕೆಯು ಘೊಷಣೆಯಷ್ಟೇ. ಆದರೆ, ಸರಬರಾಜಿನ ಲೆಕ್ಕದಲ್ಲಿ ಭಾರೀ ವ್ಯತ್ಯಾಸ ಇದೆ. ಲೋಕೇಶ್​ಗೌಡ, ರೈತ ಸಂಘ ತಾಲೂಕು ಅಧ್ಯಕ್ಷ, ಗೌರಿಬಿದನೂರು ಅಧಿಕಾರಿಗಳ ಮನಸ್ಸಿಗೆ ಬಂದಂತೆ ವಿದ್ಯುತ್ ಪೂರೈಕೆ ಮತ್ತು ಕಡಿತವಾಗುತ್ತಿರುತ್ತದೆ. ಪ್ರಶ್ನಿಸಿದರೆ ಲೋಡ್ ಶೆಡ್ಡಿಂಗ್ ನೆಪ ಹೇಳಲಾಗುತ್ತದೆ. ಬೇಸಿಗೆಯಲ್ಲಿ ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಪ್ರತೀಶ್, ಜಿಲ್ಲಾ ಕಾರ್ಯದರ್ಶಿ, ರೈತ ಸಂಘ ( ಸಾಮೂಹಿಕ ನಾಯಕತ್ವ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net