ಅರಣ್ಯ ಜಂಟಿ ಸರ್ವೇ ಮುಂದೂಡಿಕೆ

klr forest
ಕೋಲಾರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ.
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ

ಮಾಜಿ ಸ್ಪೀಕರ್​ ಕೆ.ಆರ್​.ರಮೇಶ್​ ಕುಮಾರ್​ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಅರಣ್ಯ ಜಮೀನು ಜಂಟಿ ಸರ್ವೇಯನ್ನು ಮುಂದೂಡಿದ್ದು, ಹಲವು ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ.

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜಿಂಗಾಲಕುಂಟೆಯ 61 ಎಕರೆ 39 ಗುಂಟೆ ಅರಣ್ಯ ಜಮೀನು ಒತ್ತುವರಿಯಾಗಿರುವುದನ್ನು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೇ ಕಾರ್ಯ ನಡೆಸಲು ಅಪರ ಜಿಲ್ಲಾಧಿಕಾರಿ ಮಂಗಳಾ ಅವರು ಸರ್ವೇ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಅಧಿಕಾರಿಗಳು ಬುಧವಾರ ಬೆಳಗ್ಗೆ 11ಕ್ಕೆ ಜಂಟಿ ಸರ್ವೇ ನಡೆಸಲು ಸಿದ್ಧತೆ ಕೈಗೊಂಡಿದ್ದರು. ಆದರೆ, ಕೊನೆಗಳಿಗೆಯಲ್ಲಿ ತಾಂತ್ರಿಕ ಕಾರಣಗಳಿಂದ ಸರ್ವೇ ಮುಂದೂಡಲಾಗಿದೆ ಎಂದು ಡಿಡಿಎಲ್​ಆರ್​ ಕಚೇರಿ ಅಧಿಕಾರಿಗಳು, ಅರಣ್ಯ ಇಲಾಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ಇನ್ನೇನು ಬುಧವಾರ ಜಂಟಿ ಸರ್ವೇ ನಡೆಯಬಹುದು ಎಂದು ಕುತೂಹಲ ಮೂಡಿಸಿದ್ದ ಈ ವಿಚಾರ ಈಗ ರಾಜಕೀಯ ಮುಖಂಡರು ಹಾಗೂ ರೈತರಲ್ಲಿ ಹಲವು ರೀತಿ ಚರ್ಚೆಗೆ ಎಡೆಮಾಡಿದೆ.

2013ರಿಂದ ವಿಳಂಬ

ರಮೇಶ್​ ಕುಮಾರ್​ ಸ್ವಾಧಿನದಲ್ಲಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂಬ ಆರೋಪದ ಹಿನ್ನೆಲೆಯಲ್ಲಿ ಜಾಗದ ಮಾಲೀಕತ್ವಕ್ಕಾಗಿ ರಮೇಶ್​ ಕುಮಾರ್​ ಹಾಗೂ ಅರಣ್ಯ ಇಲಾಖೆ ನಡುವೆ ಪೈಪೋಟಿ ಏರ್ಪಟ್ಟು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಜಂಟಿ ಸರ್ವೇ ನಡೆಸಿ, ಒತ್ತುವರಿ ತೆರವುಗೊಳಿಸುವಂತೆ 2013ರಲ್ಲಿ ನ್ಯಾಯಾಲಯ ಆದೇಶಿಸಿತ್ತು. ಆದರೆ, ಕ್ರಮಕೈಗೊಳ್ಳಲು ಕಂದಾಯ ಹಾಗೂ ಅರಣ್ಯ ಇಲಾಖಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿಕೊಂಡು ಬರುತ್ತಿದ್ದರು. 2022ರ ಆಗಸ್ಟ್​ನಲ್ಲಿ ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯ ರೈತರನ್ನು ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸಿ ಸ್ವಾಧಿನದಲ್ಲಿರುವ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು ಎಂದು ರಾತ್ರೋರಾತ್ರಿ ತೆರವುಗೊಳಿಸಿದರು. ಆದರೆ, ರಮೇಶ್​ ಕುಮಾರ್​ ಅವರ ಜಾಗವನ್ನು ಅಧಿಕಾರಿಗಳು ಏಕೆ ತೆರವು ಮಾಡುತ್ತಿಲ್ಲ ಎಂದು ಸ್ಥಳಿಯರು ಪ್ರಶ್ನಿಸಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು. ಕೇಂದ್ರ ಸಚಿವರ ಕಚೇರಿ ಸೂಚನೆ ಮೇರೆಗೆ ಅರಣ್ಯ ಇಲಾಖೆ ಸರ್ವೇಗೆ ಸಿದ್ಧತೆ ಕೈಗೊಂಡಿತ್ತು. ಆದರೆ, ಈಗಲೂ ಸರ್ವೇ ಮಾಡದಿರುವುದು ಟೀಕೆಗೆ ಗುರಿಯಾಗಿದೆ.

ತಾಂತ್ರಿಕ ಕಾರಣ ನೀಡಿ ಮುಂದೂಡಿಕೆ

ಜಂಟಿ ಸರ್ವೇಗೆ ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದ್ದ ಬೆನ್ನಲೇ ಡಿಡಿಎಲ್​ಆರ್​ ಸರ್ವೇಯನ್ನು ತಾಂತ್ರಿಕ ಕಾರಣ ನೀಡಿ ಮುಂದೂಡಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳಿಗೆ ತಿಳಿಸಿದರು. ಸರ್ವೇ ಅಧಿಕಾರಿಗಳ ವರ್ತನೆ ಅರಣ್ಯ ಇಲಾಖಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾವಿರಾರು ಎಕರೆ ಅರಣ್ಯ ಭೂಮಿ ತೆರವುಗೊಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ 62 ಎಕರೆ ಭೂಮಿ ಸರ್ವೇ ಸವಾಲಾಗಿ ಪರಿಣಮಿಸಿದೆ.

ಪ್ರಭಾವ ಬಳಸಿ ಸರ್ವೇಗೆ ತಡೆ?

ಕಂದಾಯ ಇಲಾಖೆಯ ತಾಂತ್ರಿಕ ಕಾರಣಗಳಿಂದ ಮುಂದೂಡಿರುವ ಜಂಟಿ ಸರ್ವೇ ಕಾರ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಆದರೆ, ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಪ್ರಭಾವ ಬಳಿಸಿ, ಜಂಟಿ ಸರ್ವೇಗೆ ತಡೆ ನೀಡಿದ್ದಾರೆ ಎನ್ನಲಾಗಿದೆ. ಜಿಂಗಾಲಗುಂಟೆ ಅರಣ್ಯ ಪ್ರದೇಶದಲ್ಲಿನ ಹೊಸಹುಡ್ಯ ಗ್ರಾಮದ ಸರ್ವೇ ನಂ-.1 ಮತ್ತು 2ರಲ್ಲಿ ರಮೇಶ್​ ಕುಮಾರ್​ ಸೇರಿ ಒಟ್ಟು ಏಳು ಜನರು 122 ಎಕೆರೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದು, ಆ ಪೈಕಿ ರಮೇಶ್​ ಕುಮಾರ್​ 64 ಎಕರೆ ಒತ್ತುವರಿ ಮಾಡಿರುವ ಆರೋಪ ಇದೆ.

ಬಾಕ್ಸ್​..

ಕೃಷ್ಣಬೇರೈಗೌಡ ಭೇಟಿ ನಂತರ ಬದಲಾವಣೆ

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಜಂಟಿ ಸರ್ವೇಗೆ ದಿನಾಂಕ ನಿಗದಿಯಾಗಿತ್ತು. ಆದರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಜಿಲ್ಲೆಗೆ ಭೇಟಿ ನಿಡಿದ ಬಳಿಕ ಸರ್ವೇ ಕಾರ್ಯದ ಚಿತ್ರಣ ಬದಲಾಗಿದೆ. ಸರ್ಕಾರದ ಮಟ್ಟದಲ್ಲಿ ಪ್ರಭಾವ ಬಳಸಿ ರಮೇಶ್​ ಕುಮಾರ್​ ತಡೆಯೊಡ್ಡಿರುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಮಾತುಗಳು ಮುನ್ನೆಲೆಗೆ ಬಂದಿವೆ.

ಕೋಟ್​

ಸರ್ಕಾರದ ಮಟ್ಟದಿಂದ ಒತ್ತಡ ತಂದು ಸರ್ವೇ ಮುಂದೂಡಿದ್ದಾರೆ. ಇಲ್ಲಿ ಬಡವರಿಗೊಂದು ನ್ಯಾಯ, ಪ್ರಭಾವಿಗಳಿಗೊಂದು ನ್ಯಾಯನ, ಪ್ರಭಾವಿಗಳದ್ದು, ಒತ್ತುವರಿ ತೆರವು ಮಾಡದಿದ್ದರೆ, ಈಗಾಗಲೇ ಭೂಮಿ ಕಳೆದುಕೊಂಡಿರುವವರಿಗೆ ಜಮೀನು ವಾಪಸ್​ ಕೊಡಿಸುವ ಕೆಲಸ ಮಾಡುತ್ತೇವೆ.

> ಜಿ.ಕೆ.ವೆಂಕಟಶಿವಾರೆಡ್ಡಿ, ಶಾಸಕ, ಶ್ರೀನಿವಾಸಪುರ

ಕೋಟ್​

ಸರ್ವೇ ಅಧಿಕಾರಿಗಳು ತಾಂತ್ರಿಕ ಕಾರಣ ಹೇಳಿ ವಾರದ ಮಟ್ಟಿಗೆ ಜಂಟಿ ಸರ್ವೇ ಮುಂದೂಡಿದ್ದಾರೆ. ಯಾವುದೇ ಪ್ರಭಾವಕ್ಕೂ ಒಳಗಾಗಿಲ್ಲ. ನ್ಯಾಯ ಎಲ್ಲರಿಗೂ ಒಂದೇ. ಜಂಟಿ ಸರ್ವೇ ನಡೆದು ಅರಣ್ಯ ಜಾಗವನ್ನು ಗುರುತು ಮಾಡಿ ತೆರವುಗೊಳಿಸುತ್ತೇವೆ.

> ಏಡುಕೊಂಡಲು, ಡಿಸಿಎಫ್​, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net